ಚಿಕ್ಕಮಗಳೂರು : ನಕ್ಸಲ್ ಕೋಟೆಹೊಂಡ ರವೀಂದ್ರ ಕರ್ನಾಟಕದ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಶನಿವಾರ ತಿಳಿಸಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ‘ಕೊನೆಯ ಭೂಗತ ನಕ್ಸಲ್ ಕೋಟೆಹೊಂಡ ರವೀಂದ್ರ (ಯುಜಿ ನಕ್ಸಲ್) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ ಶರಣಾಗಿದ್ದಾನೆ ಎಂದಿದ್ದಾರೆ.
ಶರಣಾಗತಿ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ರವೀಂದ್ರನನ್ನು ಚಿಕ್ಕಮಗಳೂರಿಗೆ ಕರೆದೊಯ್ಯುತ್ತಿದ್ದಾರೆ.
ರವೀಂದ್ರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವನಾಗಿದ್ದು, ಕಳೆದೊಂದು ದಶಕದಿಂದ ರವೀಂದ್ರ ಭೂಗತನಾಗಿದ್ದ. ಆತನ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 14 ಪ್ರಕರಣ ದಾಖಲಾಗಿದ್ದವು.
ಇನ್ನೂ ತಲೆಮರೆಸಿಕೊಂಡಿದ್ದ ನಕ್ಸಲ್ ಲಕ್ಷ್ಮಿ ಕೂಡ ನಾಳೆ ಪೊಲೀಸರ ಮುಂದೆ ಶರಣಾಗಲು ಸಿದ್ಧರಾಗಿದ್ದು ರಾಜ್ಯದಲ್ಲಿ ಕೆಂಪು ಉಗ್ರರ ಇತಿಹಾಸ ಯುಗಾಂತ್ಯವಾಗಲಿದೆ.