ದೆಹಲಿ: ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಅಪರಾಧಿಗಳು ಈಗ ಹೊಸ ರೀತಿಯ ವಂಚನೆಗೆ ಕೈಹಾಕಿದ್ದಾರೆ. ಸಾಮಾನ್ಯವಾಗಿ ವಾಟ್ಸಾಪ್ ಹ್ಯಾಕ್ ಮಾಡಲು ಒಟಿಪಿ ಅಥವಾ ಪಾಸ್ವರ್ಡ್ ಬೇಕು ಎಂದು ನಾವು ಭಾವಿಸುತ್ತೇವೆ. ಆದರೆ, ಈಗ ಸುದ್ದಿಯಲ್ಲಿರುವ ‘ಘೋಸ್ಟ್ ಪೇರಿಂಗ್’ (GhostPairing) ಎಂಬ ಅಪಾಯಕಾರಿ ವಂಚನೆಯಲ್ಲಿ ಹ್ಯಾಕರ್ಗಳಿಗೆ ನಿಮ್ಮ ರಹಸ್ಯ ಸಂಕೇತಗಳ ಅಗತ್ಯವೇ ಇಲ್ಲ. ವಾಟ್ಸಾಪ್ನಲ್ಲಿರುವ ‘ಲಿಂಕ್ಡ್ ಡಿವೈಸ್’ ಎಂಬ ಅಧಿಕೃತ ಸೌಲಭ್ಯವನ್ನೇ ಬಳಸಿಕೊಂಡು ನಿಮ್ಮ ಖಾತೆಯನ್ನು ಕಬಳಿಸಲಾಗುತ್ತಿದೆ.
ವಂಚನೆ ನಡೆಯುವುದು ಹೇಗೆ? ಈ ಹ್ಯಾಕಿಂಗ್ ತಾಂತ್ರಿಕ ದೋಷಕ್ಕಿಂತ ಹೆಚ್ಚಾಗಿ ಜನರ ನಂಬಿಕೆಯ ಮೇಲೆ ನಡೆಯುತ್ತದೆ. ಹ್ಯಾಕರ್ಗಳು ನಿಮ್ಮ ಪರಿಚಿತರ ಸಂಖ್ಯೆಯಿಂದಲೇ ಒಂದು ಸಂದೇಶ ಕಳುಹಿಸುತ್ತಾರೆ. “ನೋಡು, ನಿನ್ನ ಫೋಟೋ ನನಗೆ ಸಿಕ್ಕಿತು” ಎಂಬಂತಹ ಆಕರ್ಷಕ ಸಂದೇಶದೊಂದಿಗೆ ಒಂದು ಲಿಂಕ್ ಇರುತ್ತದೆ. ನೀವು ಕುತೂಹಲದಿಂದ ಆ ಲಿಂಕ್ ಕ್ಲಿಕ್ ಮಾಡಿದಾಗ, ಅದು ಫೇಸ್ಬುಕ್ ಫೋಟೋ ಗ್ಯಾಲರಿಯಂತೆ ಕಾಣುವ ನಕಲಿ ಪುಟಕ್ಕೆ ಕರೆದೊಯ್ಯುತ್ತದೆ. ಅಲ್ಲಿ ನಿಮ್ಮ ಫೋಟೋ ನೋಡಲು ‘ವೆರಿಫೈ’ ಮಾಡಬೇಕು ಎಂದು ಕೇಳಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ದಾಖಲಿಸಿದಾಗ, ವಾಟ್ಸಾಪ್ ಒಂದು ಪೇರಿಂಗ್ ಕೋಡ್ (Pairing Code) ಸೃಜಿಸುತ್ತದೆ. ಇದನ್ನು ಭದ್ರತಾ ತಪಾಸಣೆ ಎಂದು ನಂಬಿಸಿ ಆ ನಕಲಿ ಜಾಲತಾಣದಲ್ಲಿ ನಮೂದಿಸುವಂತೆ ಹ್ಯಾಕರ್ಗಳು ನಿಮ್ಮನ್ನು ಪ್ರೇರೇಪಿಸುತ್ತಾರೆ. ಒಮ್ಮೆ ನೀವು ಆ ಕೋಡ್ ನೀಡಿದರೆ ಸಾಕು, ಹ್ಯಾಕರ್ನ ಕಂಪ್ಯೂಟರ್ ಅಥವಾ ಮೊಬೈಲ್ ನಿಮ್ಮ ವಾಟ್ಸಾಪ್ ಖಾತೆಗೆ ಲಿಂಕ್ ಆಗಿಬಿಡುತ್ತದೆ.
ಗೊತ್ತಾಗದಂತೆ ನಡೆಯುವ ಹ್ಯಾಕಿಂಗ್ ಈ ವಂಚನೆಯ ಅತಿ ದೊಡ್ಡ ಅಪಾಯವೆಂದರೆ, ನಿಮ್ಮ ಫೋನ್ನಲ್ಲಿ ವಾಟ್ಸಾಪ್ ಎಂದಿನಂತೆ ಕೆಲಸ ಮಾಡುತ್ತಿರುತ್ತದೆ. ನೀವು ಲಾಗ್ ಔಟ್ ಆಗುವುದಿಲ್ಲ, ಅಥವಾ ಯಾವುದೇ ಸಂಶಯಾಸ್ಪದ ಸಂದೇಶಗಳು ತಕ್ಷಣಕ್ಕೆ ಬರುವುದಿಲ್ಲ. ಆದರೆ ಹಿನ್ನೆಲೆಯಲ್ಲಿ ಹ್ಯಾಕರ್ಗಳು ನಿಮ್ಮ ಎಲ್ಲಾ ಚಾಟ್ಗಳನ್ನು ಓದಬಹುದು, ಫೋಟೋ ಮತ್ತು ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೂ ನಿಮ್ಮ ಹೆಸರಿನಲ್ಲೇ ಇತರರಿಗೆ ಸಂದೇಶ ಕಳುಹಿಸಿ ಹಣದ ಬೇಡಿಕೆ ಇಡಬಹುದು. ನೀವು ಮ್ಯಾನುವಲ್ ಆಗಿ ಪರಿಶೀಲಿಸುವವರೆಗೂ ನಿಮ್ಮ ಖಾತೆ ಬೇರೆಯವರ ನಿಯಂತ್ರಣದಲ್ಲಿದೆ ಎಂಬುದು ತಿಳಿಯುವುದೇ ಇಲ್ಲ.
ರಕ್ಷಣೆ ಪಡೆಯುವುದು ಹೇಗೆ?
o ಲಿಂಕ್ಡ್ ಡಿವೈಸ್ ಪರಿಶೀಲಿಸಿ: ನಿಮ್ಮ ವಾಟ್ಸಾಪ್ ಸೆಟ್ಟಿಂಗ್ಸ್ಗೆ ಹೋಗಿ ‘ಲಿಂಕ್ಡ್ ಡಿವೈಸ್’ (Linked Devices) ಆಯ್ಕೆಯನ್ನು ಆಗಾಗ ಪರೀಕ್ಷಿಸಿ. ನಿಮಗೆ ತಿಳಿಯದ ಯಾವುದಾದರೂ ಸಾಧನ ಲಿಂಕ್ ಆಗಿದ್ದರೆ ತಕ್ಷಣ ‘ಲಾಗ್ ಔಟ್’ ಮಾಡಿ.
o ಅಪರಿಚಿತ ಲಿಂಕ್ಗಳಿಂದ ದೂರವಿರಿ: ನಿಮ್ಮ ಆತ್ಮೀಯರಿಂದಲೇ ಬಂದಿದ್ದರೂ, ಫೋಟೋ ಅಥವಾ ವಿಡಿಯೋ ನೋಡಲು ಕೋಡ್ ಕೇಳುವ ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
o ಟೂ-ಸ್ಟೆಪ್ ವೆರಿಫಿಕೇಶನ್: ನಿಮ್ಮ ವಾಟ್ಸಾಪ್ ಖಾತೆಗೆ ಹೆಚ್ಚುವರಿ ಭದ್ರತೆ ನೀಡಲು ‘ಟೂ-ಸ್ಟೆಪ್ ವೆರಿಫಿಕೇಶನ್’ ಸಕ್ರಿಯಗೊಳಿಸಿ.
o ಪೇರಿಂಗ್ ಕೋಡ್ ಹಂಚಿಕೊಳ್ಳಬೇಡಿ: ವಾಟ್ಸಾಪ್ ನೀಡುವ ಯಾವುದೇ ಕೋಡ್ ಅನ್ನು ವೆಬ್ಸೈಟ್ಗಳಲ್ಲಿ ನಮೂದಿಸಬೇಡಿ. ಪೇರಿಂಗ್ ಕೋಡ್ ಕೇವಲ ನೀವು ವೈಯಕ್ತಿಕವಾಗಿ ಮತ್ತೊಂದು ಕಂಪ್ಯೂಟರ್ನಲ್ಲಿ ವಾಟ್ಸಾಪ್ ಬಳಸಲು ಮಾತ್ರ ಸೀಮಿತವಾಗಿರಲಿ.

































