ದೆಹಲಿ: ಆಗಸ್ಟ್ 1 ರಿಂದ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಜಾರಿಗೆ ಬರಲಿವೆ. ಫೋನ್ ಪೇ, ಗೂಗಲ್ ಪೇ, ಪೇಟಿಂನಂತಹ ಯುಪಿಐ ಆಧಾರಿತ ಬಳಕೆದಾರರಿಗೆ ಬದಲಾವಣೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಆಟೋ ಪೇಗೆ ನಿಗದಿತ ಸಮಯ, ವಹಿವಾಟು ಸ್ಟೇಟಸ್ ಚೆಕಿಂಗ್ ಗೆ ನಿರ್ಬಂಧ, ಪೇಮೆಂಟ್ ರಿಹರ್ಲ್ ಲಿಗೆ ಮಿತಿ ಸೇರಿ ಹಲವು ಬದಲಾವಣೆಯಾಗಲಿವೆ.
ಹೊಸ ನಿಯಮದ ಪ್ರಕಾರ ನಿತ್ಯ ಬ್ಯಾಲೆನ್ಸ್ ತಿಳಿಯಲು ಇನ್ನು ಮುಂದೆ ಮಿತಿ ಇರಲಿದೆ. ಎರಡು ಆ್ಯಪ್ ಗಳನ್ನು ಬಳಸುತ್ತಿದ್ದಲ್ಲಿ ಪ್ರತಿ ಆ್ಯಪ್ ನಲ್ಲಿ 50ರಂತೆ ಒಟ್ಟು 100 ಸಲ ಬ್ಯಾಲೆನ್ಸ್ ನೋಡಬಹುದು. ಅಷ್ಟೇ ಅಲ್ಲ, ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳನ್ನು ದಿನಕ್ಕೆ 25 ಬಾರಿ ಚೆಕ್ ಮಾಡಬಹುದು.
ನೆಟ್ ಫ್ಲಿಕ್ಸ್, ಯುಟ್ಯೂಬ್ ಸಬ್ಸ್ಕ್ರಿಪ್ಷನ್, ಮ್ಯೂಚುವಲ್ ಫಂಡ್, ಎಸ್ಐಪಿ, ಇಎಂಐ, ಯುಟಿಲಿಟಿ ಬಿಲ್ ಮೊದಲಾದವುಗಳಿಗೆ ಸಂಬಂಧಿಸಿದ ಆಟೋ ಪೇ ಇನ್ನು ಮುಂದೆ ನಿಗದಿತ ಸಮಯದ ಸ್ಲಾಟ್ ಗಳಲ್ಲಿ ಮಾತ್ರ ನಡೆಯಲಿದೆ. ಬೆಳಗ್ಗೆ 10 ಗಂಟೆಯ ಮೊದಲು, ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ರಾತ್ರಿ 9:30 ನಂತರ ಮಾತ್ರ ಇನ್ನು ಮುಂದೆ ಆಟೋ ಪೇ ನಡೆಯಲಿದೆ. ಇದರಿಂದ ಪೀಕ್ ಅವರ್ ಗಳಲ್ಲಿ ಸರ್ವರ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ವಹಿವಾಟು ವಿಫಲವಾದಲ್ಲಿ ಒಬ್ಬ ಬಳಕೆದಾರ ದಿನಕ್ಕೆ ಮೂರು ಬಾರಿ ಸ್ಟೇಟಸ್ ಚೆಕ್ ಮಾಡಬಹುದು. ಪ್ರತಿ ಚೆಕಿಂಗ್ ನ ನಡುವೆ ಕನಿಷ್ಠ 90 ಸೆಕೆಂಡ್ ಅಂತರ ಇರಬೇಕು.
ಒಬ್ಬ ಬಳಕೆದಾರ 30 ದಿನದಲ್ಲಿ ಕೇವಲ 10 ಬಾರಿ ಪೇಮೆಂಟ್ ರಿಹರ್ಸಲ್ ವಿನಂತಿ ಸಲ್ಲಿಸಬಹುದು. ಒಬ್ಬನೇ ವ್ಯಕ್ತಿ ಅಥವಾ ಸಂಸ್ಥೆಗೆ ಐದು ಬಾರಿ ಮಾತ್ರ ಸಲ್ಲಿಸಬಹುದಾಗಿದೆ.
ಈ ತಿಂಗಳ ಆರಂಭದಿಂದ ಜಾರಿಯಲ್ಲಿರುವ ನಿಯಮದ ಪ್ರಕಾರ ಹಣ ಕಳುಹಿಸುವ ಮೊದಲು ರಿಸಿವರ್ ಬ್ಯಾಂಕ್ ಹೆಸರು ಡಿಸ್ ಪ್ಲೇ ಆಗುತ್ತದೆ. ಇದು ತಪ್ಪು ಖಾತೆಗೆ ಹಣ ಕಳುಹಿಸುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ.
ಇನ್ನು ಯುಪಿಐ ವಹಿವಾಟು ಬಳಕೆದಾರರಿಗೆ ಉಚಿತವಾಗಿದ್ದರೂ ಅದರ ಖರ್ಚನ್ನು ಬ್ಯಾಂಕುಗಳು ಇತರ ಪಾಲುದಾರರಿಗೆ ಸರ್ಕಾರವೇ ಭರಿಸುತ್ತಿದೆ.. ಯುಪಿಐ ವ್ಯವಸ್ಥೆ ಆರ್ಥಿಕವಾಗಿ ಕಾರ್ಯಸಾಧ್ಯ ಆಗಿರಲು ಭವಿಷ್ಯದಲ್ಲಿ ಉಚಿತ ವಹಿವಾಟನ್ನು ನಿಲ್ಲಿಸಬೇಕಾಗಬಹುದು ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
 
				 
         
         
         
															 
                     
                     
                     
                    


































 
    
    
        