ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಅವರು ಹಾಲಿವುಡ್ ಅನ್ನು ಉಳಿಸಲು ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದು, ಅಮೆರಿಕದ ಹೊರಗೆ ನಿರ್ಮಾಣವಾಗುವ ಎಲ್ಲಾ ಸಿನಿಮಾಗಳಿಗೆ ಶೇ.100 ತೆರಿಗೆ ವಿಧಿಸಲು ರೆಡಿಯಾಗಿದ್ದಾರೆ.
ಟ್ರಂಪ್ ಅವರು ಅಮೆರಿಕದಲ್ಲಿ ವಿದೇಶಿ ಚಿತ್ರಗಳ ಮೇಲೆ ಶೇ. 100 ತೆರಿಗೆ ವಿಧಿಸಿ ಈ ಆದೇಶ ಹೊರಡಿಸಿದ್ದಾರೆ. ಹಾಲಿವುಡ್ ಉಳಿಸಲು ಟ್ರಂಪ್ ಅವರು ಈ ಕ್ರಮ ಕೈಗೊಂಡಿದ್ದು, ಇದರಿಂದ ಅಮೆರಿಕದಲ್ಲಿ ಭಾರತೀಯ ಚಿತ್ರಗಳ ಬಿಡುಗಡೆ ದುಬಾರಿ ಆಗಲಿದೆ. ಈ ನಿರ್ಧಾರದಿಂದ ಭಾರತೀಯ ಸಿನಿಮಾ ಉದ್ಯಮ ಸಂಕಷ್ಟಕ್ಕೆ ಸಿಲುಕಲಿದೆ.
ಈ ಕುರಿತು ಅಮೆರಿಕದ ಶ್ವೇತ ಭವನದಲ್ಲಿ ಮಾತನಾಡಿರುವ ಅವರು, ‘ಅಮೆರಿಕದ ಹೊರಗೆ ತಯಾರಾಗುವ ಎಲ್ಲಾ ಚಿತ್ರಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಲಾಗುತ್ತಿದೆ. ಅಮೆರಿಕದ ನಿರ್ಮಾಪಕರು ಮತ್ತು ಸ್ಟುಡಿಯೋಗಳು ವಿದೇಶದಲ್ಲಿ ಕೆಲಸ ಮಾಡುವ ಪ್ರವೃತ್ತಿಯಿಂದ ಹಾಲಿವುಡ್ ಹಾಳಾಗುತ್ತಿದೆ. ಹಾಲಿವುಡ್ ಸಂಕಷ್ಟದಲ್ಲಿ ಇದ್ದು, ಅದನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ.
‘ತುಂಬಾನೇ ವೇಗವಾಗಿ ಅಮೆರಿಕದಲ್ಲಿ ಸಿನಿಮಾ ಉದ್ಯಮ ಸಾಯುತ್ತಿದೆ. ನಮ್ಮ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ಅಮೆರಿಕದಿಂದ ದೂರ ಸೆಳೆಯಲು ಇತರ ದೇಶಗಳು ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ನೀಡುತ್ತಿವೆ. ಹಾಲಿವುಡ್ ಮತ್ತು ಅಮೆರಿಕದ ಇತರ ಹಲವು ಪ್ರದೇಶಗಳು ಧ್ವಂಸಗೊಳ್ಳುತ್ತಿವೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ’ ಎಂದು ತಿಳಿಸಿದ್ದಾರೆ.
ಅನೇಕ ಭಾರತೀಯ ಸಿನಿಮಾಗಳು ಅಮೆರಿಕದಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿವೆ. ಆದರೆ ಇದೀಗ ಟ್ರಂಪ್ ನಿರ್ಧಾರದಿಂದ ಚಿತ್ರಗಳು ದುಬಾರಿ ಆಗಲಿವೆ. ಹೀಗಾಗಿ ಜನರು ಸಿನಿಮಾ ವೀಕ್ಷಣೆ ಕಡಿಮೆ ಮಾಡಲಿದ್ದು, ಇದು ಸಿನಿಮಾದ ಗಳಿಕೆ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ವಿದೇಶಿ ಹಂಚಿಕೆದಾರರು ಸಿನಿಮಾ ತೆಗೆದುಕೊಳ್ಳಲು ಹಿಂದೇಟು ಹಾಕಲಿದ್ದಾರೆ.