ಬೆಂಗಳೂರು : ಬೆಂಗಳೂರಿನಲ್ಲಿ 37 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆಯಾದ ಎರಡು ದಿನಗಳ ಬಳಿಕ ಪೊಲೀಸರು ಆತನ 19 ವರ್ಷದ ಪತ್ನಿ ಮತ್ತು ಆಕೆಯ ತಾಯಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಅವರು ಮಾರ್ಚ್ 22 ರ ಸಂಜೆ ವಾಯುವ್ಯ ಬೆಂಗಳೂರಿನ ಸೋಲದೇವನಹಳ್ಳಿಯ ಬಿಜಿಎಸ್ ಲೇಔಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಕೊಲೆಯಾದ 2 ದಿನಗಳ ನಂತರ ಅಂದರೆ ಮಾ.24ರಂದು ಪೊಲೀಸರು ಸಿಂಗ್ ಅವರ ಪತ್ನಿ ಯಶಸ್ವಿನಿ ಮತ್ತು ಆಕೆಯ ತಾಯಿ ಹೇಮಾ ಬಾಯಿ (37) ಅವರನ್ನು ಬಂಧಿಸಲಾಗಿದೆ. ಸದ್ಯ ಯಶಸ್ವಿನಿ ಮತ್ತು ಹೇಮಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸರ ಪ್ರಕಾರ, ಯಶಸ್ವಿನಿ ತನ್ನ ಪೋಷಕರ ವಿರೋಧದ ನಡುವೆಯೂ ಕೆಲವು ತಿಂಗಳ ಹಿಂದೆ ಸಿಂಗ್ ಅವರನ್ನು ವಿವಾಹವಾದರು. ಮದುವೆಯಾದ ಬಳಿಕ ಸಿಂಗ್‌ಗೆ ಬೇರೆಯವರೊಂದಿಗೆ ಸಂಬಂಧವಿದೆ ಎಂದು ಯಶಸ್ವಿನಿಗೆ ಅನುಮಾನವಿತ್ತು. ಇದರಿಂದಾಗಿ ದಂಪತಿಗಳ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ನಂತರ ಯಶಸ್ವಿನಿ ತನ್ನ ಪೋಷಕರ ಮನೆಗೆ ವಾಪಾಸ್ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 22 ರಂದು, ಯಶಸ್ವಿನಿ ಸಿಂಗ್ ಅವರನ್ನು ಸಂಪರ್ಕಿಸಿ ಬಾಗಲೂರಿನ ಬಳಿ ಭೇಟಿಯಾಗಲು ತಿಳಿಸಿದ್ದಾಳೆ. ಸಿಂಗ್ ಅವರು ಸೋಲದೇವನಹಳ್ಳಿಗೆ ಕಾರಿನಲ್ಲಿ ತೆರಳಿದ್ದಾರೆ. ಅಲ್ಲಿ ಆಕೆ ಸಿಂಗ್ ತಿಂದ ಆಹಾರಕ್ಕೆ ನಿದ್ರೆ ಮಾತ್ರೆ ಬೆರೆಸಿದಳು ಎಂದು ಆರೋಪಿಸಲಾಗಿದೆ. ಹೇಮಾ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಸಿಂಗ್ ಅವರು ಪ್ರಜ್ಞೆ ಕಳೆದುಕೊಳ್ಳುತ್ತಿರುವ ವೇಳೆಗೆ, ಯಶಸ್ವಿನಿ ಮತ್ತು ಹೇಮಾ ಆತನನ್ನು ಚಾಕುವಿನಿಂದ ಇರಿದು ಕುತ್ತಿಗೆಯ ಹಿಂಭಾಗಕ್ಕೆ ಮಾರಣಾಂತಿಕ ಗಾಯ ಮಾಡಿದರು ಎಂದು ಆರೋಪಿಸಲಾಗಿದೆ. ಸಿಂಗ್ ಗಾಯಗಳಿಂದ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.