ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜನ್ ಕಿಶನ್ (Rajat Kishan) ಅವರನ್ನು ಬಸವೇಶ್ವರನಗರ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆ 2 ಬಾರಿ ನೋಟಿಸ್ ನೀಡಿದ್ದರು. ಆದರೆ ಪೊಲೀಸ್ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಹೀಗಾಗಿ ರಜತ್ ಅವರನ್ನು ಬಂಧಿಸಲಾಗಿದೆ.
ರಜತ್ ಬಂಧನದ ಬೆನ್ನಲ್ಲೇ ವಿನಯ್ ಗೌಡ ಬಂಧನಕ್ಕೂ ಪೊಲೀಸರು ಮುಂದಾಗಿದ್ದಾರೆ. ಬಂಧಿಸಿದ ಬಳಿಕ ಇಂದೇ 24ನೇ ಎಸಿಎಂಎಂ ಕೋರ್ಟ್‌ಗೆ ಇಬ್ಬರನ್ನೂ ಪೊಲೀಸರು ಹಾಜರುಪಡಿಸಲಿದ್ದಾರೆ.
ಪೊಲೀಸರು ತಮಗಾಗಿ ಹುಡುಕಾಟ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿನಯ್ ಗೌಡ ಪಬ್ಲಿಕ್, ನಾನು ಸಿನಿಮಾ ಚಿತ್ರೀಕರಣದಲ್ಲಿದ್ದೇನೆ. ನೆನ್ನೆ ನಾನು ಪೊಲೀಸ್ ಸ್ಟೇಷನ್‌ಗೆ ಹೋಗಿ ಬಂದಿದ್ದೇನೆ. ವಾರಂಟ್ ಜಾರಿಯಾಗಿರುವುದು ನನಗೆ ಗೊತ್ತಿಲ್ಲ. ಸದ್ಯ ನಾನು ಮನೆಯಲ್ಲಿಲ್ಲ, ನನಗೆ ಯಾವುದೇ ಕರೆಯೂ ಬಂದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಈ ಹಿಂದೆ ಬಂಧನವಾಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್, ವಿನಯ್ ಗೌಡಗೆ (Rajath and Vinay Gowda) ನಗರದ 24ನೇ ಎಸಿಎಂಎಂ ಕೋರ್ಟ್ ಮಾ.28ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜಾಮೀನಿಗಾಗಿ 10 ಸಾವಿರ ರೂ. ಶ್ಯೂರಿಟಿ ಸಲ್ಲಿಸಲು ಆರೋಪಿಗಳಿಗೆ ಕೋರ್ಟ್ ಸೂಚನೆ ನೀಡಿತ್ತು. ಹೀಗಾಗಿ ಜೈಲಿನಿಂದ ರಜತ್ ಮತ್ತು ವಿನಯ್ ಗೌಡ ರಿಲೀಸ್ ಆಗಿದ್ದರು.