ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರ ಬಳಿಯ ಕದಂಬ ನೌಕಾನೆಲೆಯಲ್ಲಿನ ಐಎನ್ಎಸ್ ವಾಗ್ಶೀರ್ ಸಬ್ ಮರಿನ್‌ನಲ್ಲಿ ಸುಮಾರು 2 ತಾಸುಗಳಿಗೂ ಹೆಚ್ಚು ಸಮಯ ಪಯಣಿಸಿದರು. ಸಬ್ ಮರಿನ್‌ನಲ್ಲಿ ಪ್ರಯಾಣಿಸಿದ 2ನೇ ರಾಷ್ಟಪತಿ ಎಂಬ ದಾಖಲೆ ಬರೆದರು.
ಐಎನ್ಎಸ್ ವಾಗ್ಶೀರ್ (ಎಸ್26) ಅನ್ನು ಮುಂಬೈನ ಮಜಗಾವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದ್ದು ಇದು ಭಾರತದ ಪ್ರಾಜೆಕ್ಟ್ 75 (ಸ್ಕಾರ್ಪಿನ್-ಕ್ಲಾಸ್)ನ 6ನೇ ಮತ್ತು ಅಂತಿಮ ಜಲಾಂತರ್ಗಾಮಿ ನೌಕೆಯಾಗಿದೆ. ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ ತಂತ್ರಜ್ಞಾನ ವರ್ಗಾವಣೆಗಾಗಿ ಮೇಕ್ ಇನ್ ಇಂಡಿಯಾದಲ್ಲಿ ನಿರ್ಮಿಸಿದ್ದು ವಿಶೇಷ. ಪ್ರಾಜೆಕ್ಟ್ 75 ವರ್ಗದ 6ನೇ ಜನರೇಶನ್ ಜಲಾಂತರ್ಗಾಮಿ ನೌಕೆಯಾದ ವಾಗ್ಶೀರ್ ಅನ್ನು ಕಡ್ಡಾಯವಾಗಿ ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ 2025, ಜ.9ರಂದು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು.
ಈ ಜಲಾಂತರ್ಗಾಮಿ ನೌಕೆಯನ್ನು ಏ.22ರಂದು ಪ್ರಯೋಗ ನಡೆಸಲಾಗಿತ್ತು. ಡಿ.23ರಂದು ತನ್ನ ಸಮುದ್ರ ಪ್ರಯೋಗಗಳನ್ನು ಪ್ರಾರಂಭಿಸಿತು. ಇದೇ ನೌಕೆಯಲ್ಲಿ ದ್ರೌಪದಿ ಮುರ್ಮು ಪಯಣಿಸಿದರು. ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಸ್ವಾಗತಿಸಿದರು. ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್, ಎಸ್ಪಿ ದೀಪನ್ ಎಂ. ಎನ್. ಹಾಗೂ ಕಾರವಾರ ನೆವಲ್ ಬೇಸ್ ನ ಫೀಲ್ಡ್ ಆಫೀಸರ್ ಕಮಾಂಡೆಂಟ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ನೌಕಾಪಡೆಯ ಹಿರಿಯ ಅಧಿಕಾರಿಗಳು ಹಾಗೂ .ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ನೇವಿ ಮುಖ್ಯಸ್ಥ ಮತ್ತು ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ಫ್ಲಾಗ್ ಆಫೀಸರ್ ಕಮಾಂಡಿಂಗ್ ಕರ್ನಾಟಕ ನೇವಲ್ ಏರಿಯಾ ಈ ಸಮಯದಲ್ಲಿ ಉಪಸ್ಥಿತರಿದ್ದರು.

































