ವಿಧಾನಸಭೆ: ಕೃಷಿ ಇಲಾಖೆಯ ಗ್ರೂಪ್ ‘ಬಿ’ ಮತ್ತು ‘ಸಿ’ ವೃಂದದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ವೃಂದದ 945 ಹುದ್ದೆಗಳಿಗೆ ಮೂರು ತಿಂಗಳೊಳಗೆ ನೇಮಕಾತಿ ನಡೆಸುವುದಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಬುಧವಾರ ಪ್ರಶೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿರಣ್ ಕುಮಾರ್ ಕೊಡ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ಇಲಾಖೆಯಲ್ಲಿ ಕೊನೆಯದಾಗಿ 2018ರಲ್ಲಿ 370 ಹುದ್ದೆಗಳಿಗೆ ನೇಮಕಾತಿ ನಡೆದಿದೆ.
ನಂತರ ಇಲಾಖೆಯಲ್ಲಿ ಯಾವುದೇ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೆಪಿಎಸ್ಸಿಯಿಂದ ನೇರ ನೇಮಕಾತಿ ಮುಖಾಂತರ 945 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಈ ನಡುವೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಅಧಿಸೂಚನೆ ರದ್ದುಪಡಿಸಲಾಗಿದೆ. ಇದೀಗ ಸರ್ಕಾರದ ನಿರ್ದೇಶನದ ಮೇರೆಗೆ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.































