ಅಮರಾವತಿ : ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ತನ್ನ ನಡೆಯುತ್ತಿರುವ ರಣಹದ್ದು ಸಂರಕ್ಷಣಾ ಯೋಜನೆಯ ಭಾಗವಾಗಿ ಮಹಾರಾಷ್ಟ್ರದ ಮೆಲ್ಘಾಟ್ ಹುಲಿ ಮೀಸಲು ಪ್ರದೇಶದಲ್ಲಿ ತೀವ್ರವಾಗಿ ಅಳಿವಿನಂಚಿನಲ್ಲಿರುವ 15 ಭಾರತೀಯ ರಣಹದ್ದುಗಳನ್ನು ಯಶಸ್ವಿಯಾಗಿ ಕಾಡಿಗೆ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ 23ರಂದು ಹರಿಯಾಣದ ಪಿಂಜೋರ್‌ನಲ್ಲಿರುವ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರದಿಂದ ಈ ಸ್ಕ್ಯಾವೆಂಜರ್ ಪಕ್ಷಿಗಳನ್ನು ಅಮರಾವತಿ ಜಿಲ್ಲೆಯ ಮೆಲ್ಘಾಟ್‌ನ ಸೋಮತಾನಾ ಶ್ರೇಣಿಗೆ ಸ್ಥಳಾಂತರಿಸಲಾಗಿತ್ತು. ನಂತರ ಅವುಗಳನ್ನು ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಪೂರ್ವ-ಬಿಡುಗಡೆ ಪಕ್ಷಿಧಾಮದಲ್ಲಿ ಇರಿಸಲಾಗಿತ್ತು.
ಡಿಸೆಂಬರ್ 19, 2025ರಂದು ಎಲ್ಲಾ ರಣಹದ್ದುಗಳಿಗೆ ಜಿಎಸ್‌ಎಂ ಮತ್ತು ಉಪಗ್ರಹ ಟ್ಯಾಗ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದ ವಿಜ್ಞಾನಿಗಳಿಗೆ ಅವುಗಳ ಚಲನವಲನ ಮತ್ತು ಕಾಡಿಗೆ ಬಿಡುಗಡೆಯಾದ ನಂತರದ ಜೀವಿತವನ್ನು ನಿಕಟವಾಗಿ ಗಮನಿಸುವ ಅವಕಾಶ ದೊರೆಯುತ್ತದೆ. ಜನವರಿ 2ರಂದು ‘ಬಿಡುಗಡೆ’ ಪ್ರಕ್ರಿಯೆ ಆರಂಭಗೊಂಡಿತು. ರಿಮೋಟ್ ನಿಯಂತ್ರಣದ ಮೂಲಕ ಪಕ್ಷಿಧಾಮದ ದ್ವಾರಗಳನ್ನು ತೆರೆಯಲಾಗಿದ್ದು, ರಣಹದ್ದುಗಳು ಸ್ವಾಭಾವಿಕವಾಗಿ ಹೊರಬರುವಂತೆ ಪ್ರೋತ್ಸಾಹಿಸಲು ಆವರಣದ ಹೊರಭಾಗದಲ್ಲಿ ಆಹಾರವನ್ನು ಒದಗಿಸಲಾಯಿತು.
ಈ ಸಂರಕ್ಷಣಾ ಯೋಜನೆಗೆ ಸೀಮಿತ ಆಹಾರ ಲಭ್ಯತೆ, ಸೆರೆಹಿಡಿದ ತಳಿ ಪಕ್ಷಿಗಳಿಗೆ ಮಾರ್ಗದರ್ಶನ ನೀಡುವ ಸ್ಥಳೀಯ ರಣಹದ್ದುಗಳ ಕೊರತೆ ಹಾಗೂ ಭೂದೃಶ್ಯದಲ್ಲಿ ಹಾನಿಕಾರಕ ಪಶುವೈದ್ಯಕೀಯ ಔಷಧಗಳ ನಿರಂತರ ಬಳಕೆ ಸೇರಿದಂತೆ ಹಲವು ಸವಾಲುಗಳು ಎದುರಾದವು ಎಂದು ಬಿಎನ್‌ಎಚ್‌ಎಸ್ ಸಂರಕ್ಷಣಾ ಜೀವಶಾಸ್ತ್ರಜ್ಞ ಭಾಸ್ಕರ್ ದಾಸ್ ತಿಳಿಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಟೆಕಡೆ ಅವರ ಸಮ್ಮುಖದಲ್ಲಿ, ಬಿಎನ್‌ಎಚ್‌ಎಸ್ ಸಿಬ್ಬಂದಿಯ ಸಹಕಾರದೊಂದಿಗೆ ಬಿಎನ್‌ಎಚ್‌ಎಸ್ ನಿರ್ದೇಶಕ ಕಿಶೋರ್ ರಿಥೆ ಮತ್ತು ಸೋಮತಾನ ವಲಯ ಅರಣ್ಯ ಅಧಿಕಾರಿ ವಿನಿಲ್ ಹತ್ವಾರ್ ಅವರು ರಣಹದ್ದುಗಳ ಬಿಡುಗಡೆಯನ್ನು ನೆರವೇರಿಸಿದರು. “ಮೆಲ್ಘಾಟ್ ಉದ್ದ ಕೊಕ್ಕಿನ ರಣಹದ್ದುಗಳ ಪ್ರಮುಖ ಭದ್ರಕೋಟೆಯಾಗಿದೆ. ಬಿಡುಗಡೆಯಾದ ಪಕ್ಷಿಗಳು ಮತ್ತೆ ಈ ಪ್ರದೇಶದಲ್ಲಿ ನೆಲೆಸಿಕೊಳ್ಳುತ್ತವೆ ಎಂಬ ವಿಶ್ವಾಸವಿದೆ” ಎಂದು ಕಿಶೋರ್ ರಿಥೆ ಹೇಳಿದ್ಧಾರೆ.
































