ಚಿತ್ರದುರ್ಗ: ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿದ ಜಿಲ್ಲೆಯ 769 ರೈತರಿಗೆ ಒಟ್ಟು 109.93 ಲಕ್ಷ ರೂ. ಪರಿಹಾರ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ವಿತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ವಿವಿಧ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯ ಬಳಿಕ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪ್ರತಿ ಹೆಕ್ಟೇರ್‍ಗೆ ನಿಗದಿಪಡಿಸಿರುವ ಇನ್‍ಪುಟ್ ಸಬ್ಸಿಡಿ ಮೊತ್ತಕ್ಕೆ, ರಾಜ್ಯ ಸರ್ಕಾರವು ಪ್ರತ್ಯೇಕವಾಗಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಮಾತ್ರ ಅನ್ವಯವಾಗುವಂತೆ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‍ಗೆ 8500 ರೂ. ಗಳ ಇನ್‍ಪುಟ್ ಸಬ್ಸಿಡಿ ಸೇರಿಸಿ, ಪರಿಹಾರ ಮೊತ್ತ ಪಾವತಿಸುತ್ತಿದೆ. ಇದರಿಂದಾಗಿ ಜಿಲ್ಲೆಯ ರೈತರು ಕೇಂದ್ರ ಸರ್ಕಾರದ ನಿಯಮದಂತೆ ಪಡೆಯುವ ಪರಿಹಾರ ಮೊತ್ತಕ್ಕೆ, ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‍ಗೆ ನೀಡುವ 8500 ರೂ. ಗಳ ಇನ್‍ಪುಟ್ ಸಬ್ಸಿಡಿಯ ಲಾಭ ಪಡೆಯಲಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ, ಬೆಳೆ ಹಾನಿಯಾಗಿದ್ದ ಕೃಷಿ, ತೋಟಗಾರಿಕೆ ಬೆಳೆಗಳ ಬಗ್ಗೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳನ್ನು ಒಳಗೊಂಡ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ, ವರದಿ ಪಡೆದಿದ್ದು, ಅದರನ್ವಯ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಇದೀಗ ಪರಿಹಾರ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಒಟ್ಟು 769 ರೈತರ 467.16 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದ್ದನ್ನು ಸಮೀಕ್ಷಾ ತಂಡ ವರದಿ ಸಲ್ಲಿಸಿರುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ಮೊತ್ತ 70.05 ಲಕ್ಷ ರೂ. ಗಳನ್ನು ಒದಗಿಸುತ್ತಿದ್ದು, ಇದಕ್ಕೆ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‍ಗೆ ಬೆಳೆಯಾನುಸಾರ ಪ್ರತಿ ಹೆಕ್ಟೇರ್‍ಗೆ 8500 ರೂ. ಗಳಂತೆ ಇನ್‍ಪುಟ್ ಸಬ್ಸಿಡಿ ಮೊತ್ತ 39.88 ಲಕ್ಷ ರೂ. ಸೇರಿಸಿ, ಒಟ್ಟು 109.93 ಲಕ್ಷ ರೂ. ಗಳನ್ನು ಪಾವತಿಸಲಾಗುತ್ತಿದೆ.
ಬೆಳೆ ಹಾನಿ ಪರಿಹಾರಕ್ಕಾಗಿ ಇನ್‍ಪುಟ್ ಸಬ್ಸಿಡಿಯ ದರಗಳನ್ನು ಪ್ರತಿ ಹೆಕ್ಟೇರ್‍ಗೆ ಮಳೆಯಾಶ್ರಿತ ಬೆಳೆಗಳಿಗೆ ರೂ. 8,500 ರಿಂದ 17,000, ನೀರಾವರಿ ಬೆಳೆಗಳಿಗೆ ರೂ. 17,000 ರಿಂದ 25,500 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‍ಗೆ ರೂ. 22,500 ರಿಂದ 31,000 ರೂ. ಗಳಿಗೆ ರಾಜ್ಯ ಸರ್ಕಾರ ಹೆಚ್ಚಿಸಿದಂತಾಗಿದೆ.
ಬೆಳೆ ಹಾನಿ ಪರಿಹಾರ ಮೊತ್ತವನ್ನು ಸಂಬಂಧಿಸಿದ ರೈತರಿಗೆ ತ್ವರಿತವಾಗಿ ಪಾವತಿಯಾಗಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಜಂಟಿನಿರ್ದೇಶಕಿ ಸವಿತಾ, ಉಪಕೃಷಿ ನಿರ್ದೇಶಕ ಶಿವಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
































