ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಹಾಗೂ ಎಲ್ಲಾ 17 ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಪೈಕಿ ದರ್ಶನ್ ಹಾಗೂ ಏಳು ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈಗ ತೀರ್ಪನ್ನು ಕಾಯ್ದಿರಿಸಿದೆ. 10 ದಿನಗಳ ಬಳಿಕ ದರ್ಶನ್ ಜಾಮೀನು ಅರ್ಜಿ ಬಗ್ಗೆ ತೀರ್ಪು ನೀಡುವುದಾಗಿ ಕೋರ್ಟ್ ತಿಳಿಸಿದೆ.ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿತರಾದ ದರ್ಶನ್ ಅವರು ಬೆನ್ನು ನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದರು. ಆ ಬಳಿಕ ಅವರಿಗೆ ಕರ್ನಾಟಕ ಹೈಕೋರ್ಟ್ನಿಂದ ಸಂಪೂರ್ಣ ಜಾಮೀನು ದೊರೆತಿತ್ತು. ಹೈಕೋರ್ಟ್ನ ತೀರ್ಪನ್ನು ರಾಜ್ಯ ಸರ್ಕಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೆರಿತ್ತು. ಇದೀಗ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಅಲ್ಲದೆ, ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಬಗ್ಗೆ ಅಸಮಾಧಾನ ಹೊರಹಾಕಿದೆ.
ಕರ್ನಾಟಕ ಸರ್ಕಾರ ಸಲ್ಲಿಸಿದ ಈ ಅರ್ಜಿಯನ್ನು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ಮೊದಲು ವಾದ ಮಂಡಿಸಿದರು. ‘ಇದು ಭೀಕರ ಕೊಲೆ ಕೇಸ್. ಏಳು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ರದ್ದಾಗಬೇಕು ಎನ್ನುವುದು ನಮ್ಮ ವಾದ. ಅಪಾರ್ಟ್ ಮೆಂಟ್ ಬಳಿ ಡೆಡ್ ಬಾಡಿ ಸಿಕ್ಕಿದೆ’ ಎಂದು ಅವರು ವಾದಿಸಿದರು. ಸದ್ಯ ಏಳು ಆರೋಪಿಗಳ ಜಾಮೀನನ್ನು ಮಾತ್ರ ರದ್ದು ಮಾಡಬೇಕು ಎಂದು ಮನವಿ ಮಾಡಿದರು.