ಬೆಂಗಳೂರು :ಕೋವಿಡ್ 19 ಸಂದರ್ಭದಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯು ತನ್ನ 878 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಿ ಹಲವು ವರ್ಷ ಕಳೆದರೂ ಇನ್ನೂ ಪೂರ್ಣಗೊಳಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಭಾಗ್ಯ ಮರೀಚಿಕೆಯಾಯಿತೇ ಎಂಬ ಪ್ರಶ್ನೆ ಮೂಡಿದೆ. ಕಲ್ಯಾಣ ಕರ್ನಾಟಕ ಹಾಗೂ ಉಳಿದ ಕರ್ನಾಟಕ ಪ್ರದೇಶಗಳಿಗೆ ಸುಮಾರು 878 ವಿವಿದ ಹುದ್ದೆಗಳ ನೇಮಕಾತಿಯ ಅಧಿಸೂಚನೆಯು 2022ರಲ್ಲಿ ಅರ್ಜಿ ಆಹ್ವಾನಿಸಿತ್ತು. ಆದರೆ ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಕಾರ್ಯವು ಪೂರ್ಣಗೊಂಡಿದ್ದರೂ ಆಯ್ಕೆ ಪಟ್ಟಿಯನ್ನುಇಲಾಖೆಯು ಪ್ರಕಟಿಸಿಲ್ಲ. ಉಳಿದಂತೆ ಈ ನೇಮಕಾತಿಯಲ್ಲಿ ಸುಮಾರು 204 ಪ್ರಯೋಗ ಶಾಲಾತಂತ್ರಜ್ಞರು ಹಾಗೂ 498 ಫಾರ್ಮಸಿಸ್ಟ್ ಗಳ ಹುದ್ದೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ಈಗಾಗಲೇ ಇರುವುದರಿಂದ ಗ್ರಾಮೀಣ ಮಟ್ಟದ ಆರೋಗ್ಯ ಕೇಂದ್ರಗಳಿಗೆ ಪ್ರಯೋಗ ಶಾಲಾ ತಂತ್ರಜ್ಞರ ಹಾಗೂ ಫಾರ್ಮಸಿಸ್ಟ್ ಗಳ ಬೇಡಿಕೆಯಿದೆ. ಆದರೆ ಸದ್ಯದ ನೇಮಕಾತಿಯ ವಿಳಂಭದಿಂದ 700ಕ್ಕೂ ಹೆಚ್ಚಿನ ಸರಕಾರಿ ಆರೊಗ್ಯ ಕೇಂದ್ರಗಳನ್ನೇ ಅವಲಂಬಿಸಿರುವ ಜನರು ಪರದಾಡುವಂತಾಗಿದೆ.
ಆರೋಗ್ಯ ಇಲಾಖೆಯಲ್ಲಿ ಅನೇಕ ರೀತಿಯ ರಕ್ತ ಪರೀಕ್ಷೆಗಳಿಗೆ ಬೇಕಾದ ಕಿಟ್ ಗಳು ಹಾಗೂ ಪರಿಕರಗಳನ್ನು ಒದಗಿಸಿದ್ದರೂ ಅದನ್ನು ನಿರ್ವಹಿಸಲು ಹಾಗೂ ಪರೀಕ್ಷೆ ನಡೆಸಲು ಸಿಬ್ಬಂದಿ ನೇಮಕಾತಿ ನಡಯದೇ ಇರುವುದು ಇಲಾಖೆಯ ದುರ್ಗತಿಯಾಗಿದೆ. ಇಲಾಖೆಯು ನಿಧಾನಗತಿಯಲ್ಲಿ ಪ್ರಕ್ರಿಯೆಯನ್ನು ನಡೆಸುತ್ತಿರುವ ಪರಿಣಾಮ ಜನತೆ ಸಮಸ್ಯೆಗೆ ಸಿಲುಕುವಂತಾಗಿದೆ. ಹಾಗಾಗಿ ಸರ್ಕಾರವು ನೇಮಕಾತಿ ಪ್ರಕ್ರಿಯೆಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.