ಡೆಹ್ರಾಡೂನ್ : ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಇಲ್ಲಿನ ಕುಲುವಿನ ಸ್ಕೀ ರೆಸಾರ್ಟ್ ಸೊಲಾಂಗ್ ನಾಲಾದಲ್ಲಿ ಸಿಲುಕಿದ್ದ ಸುಮಾರು 5,000 ಪ್ರವಾಸಿಗರನ್ನು ಪೊಲೀಸರು ಶುಕ್ರವಾರ ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕುಲು ಪೊಲೀಸರು, ಸೋಲಾಂಗ್ ಭಾರೀ ಹಿಮಪಾತದಿಂದಾಗಿ ಸುಮಾರು 1,000 ಪ್ರವಾಸಿಗರು ಮತ್ತು ಇತರ ವಾಹನಗಳು ಸೋಲಾಂಗ್ ನಾಲಾದಲ್ಲಿ ಸಿಲುಕಿಕೊಂಡಿವೆ. ಈ ವಾಹನಗಳಲ್ಲಿ ಸುಮಾರು 5,000 ಪ್ರವಾಸಿಗರು ಇದ್ದರು. ಶುಕ್ರವಾರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ವಾಹನಗಳು ಮತ್ತು ಪ್ರವಾಸಿಗರನ್ನು ರಕ್ಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಲಾಗಿದೆ. ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ ಮತ್ತು ಶೀತ ಅಲೆಗಳು ಮತ್ತಷ್ಟು ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಹೇಳಿದೆ. ಇನ್ನು ಡಿ.29 ರಿಂದ ಬಿಲಾಸ್ಪುರ್, ಹಮೀರ್ಪುರ್ ಮತ್ತು ಉನಾ ಜಿಲ್ಲೆಗಳನ್ನು ಒಳಗೊಂಡಂತೆ ಬಯಲು ಪ್ರದೇಶಗಳ ಮೇಲೆ ಚಳಿಗಾಳಿಯು ಪರಿಣಾಮ ಬೀರುವ ನಿರೀಕ್ಷೆಯಿದೆ. ಮಂಡಿ, ಕುಲು ಮತ್ತು ಚಂಬಾ ಸೇರಿದಂತೆ ಈ ಪ್ರದೇಶಗಳಲ್ಲಿ ಜ.1 ರವರೆಗೆ ತೀವ್ರ ಚಳಿ ಇರಲಿದೆ ಎಂದು ವರದಿಯಾಗಿದೆ.