ಬೆಂಗಳೂರು: ಆಶಾ ಕಾರ್ಯಕರ್ತೆಯರ ಬೇಡಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಡೆದ ಸಂಧಾನ ಸಭೆಯು ಯಶಸ್ವಿಯಾಗಿದ್ದು, ತಿಂಗಳಿಗೆ ₹10,000 ನಿಶ್ಚಿತ ಗೌರವಧನ ನೀಡಲು ಸರ್ಕಾರ ಒಪ್ಪಿಕೊಂಡಿದೆ. ಈ ಬೆನ್ನಲ್ಲೇ, ಆಶಾ ಕಾರ್ಯಕರ್ತೆಯರು ತಮ್ಮ ಅಹೋರಾತ್ರಿ ಧರಣಿ ಹಿಂಪಡೆದರು.
ಮಂಗಳವಾರ ಆರಂಭವಾಗಿದ್ದ ಅನಿರ್ದಿಷ್ಟಾವಧಿ ಧರಣಿಯು ಎರಡು ಸಭೆಗಳು ವಿಫಲವಾದ ಕಾರಣ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿರಿಸಿತ್ತು. ಧರಣಿ ಯಶಸ್ವಿಯಾದ ನಂತರ ಪ್ರತಿಭಟನೆ ನಿರತರು ತಮ್ಮ ಊರುಗಳಿಗೆ ಸಂಭ್ರಮದಿಂದ ತೆರಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳ ನಿಯೋಗದ ಜತೆ ಶುಕ್ರವಾರ ಸಂಜೆ ಸಭೆ ನಡೆಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ, ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ಇದ್ದರು.
ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಕೇಳಿದ ಸಿದ್ದರಾಮಯ್ಯ ಅವರು, ಗೌರವಧನವನ್ನು ಹೆಚ್ಚಿಸಲು ಸಮ್ಮತಿ ಸೂಚಿಸಿದರು. ಇಲಾಖಾ ಮಟ್ಟದಲ್ಲಿ ಪರಿಶೀಲನೆ ನಡೆಸಿ ಇತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ.ಶಿವಕುಮಾರ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು, ಸಭೆಯ ನಿರ್ಣಯಗಳನ್ನು ಘೋಷಿಸಿದರು. ಧರಣಿ ಹಿಂಪಡೆಯಿರಿ ಎಂದು ಮನವಿ ಮಾಡಿಕೊಂಡರು.
ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರತಿಭಟನೆನಿರತರ ಪ್ರತಿನಿಧಿಗಳ ಜತೆಗೆ ಶುಕ್ರವಾರ ಬೆಳಿಗ್ಗೆಯೇ ಸಭೆ ನಡೆಸಿದ್ದರು. ಆದರೆ ಬೇಡಿಕೆ ಈಡೇರಿಕೆ ಸಂಬಂಧ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಮಾತುಕತೆ ವಿಫಲವಾಗಿತ್ತು.
ಸಭೆ ವಿಫಲವಾದ ಮಾಹಿತಿ ದೊರೆತ ನಂತರ ಆಶಾ ಕಾರ್ಯಕರ್ತೆಯರ ಆಕ್ರೋಶ ಹೆಚ್ಚಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸ್ಥಳಕ್ಕೆ ಭೇಟಿ ನೀಡಿ, ಆಶಾ ಕಾರ್ಯಕರ್ತೆಯರ ಜತೆ ಸಂಜೆ 4.30ರ ವೇಳೆಗೆ ಮಾತುಕತೆ ನಡೆಸಿದರು.
ಆಶಾ ಕಾರ್ಯಕರ್ತೆಯರಿಗೆ ಭತ್ಯೆಯನ್ನೂ ಒಳಗೊಂಡು ಮಾಸಿಕ ₹10000 ನಿಶ್ಚಿತ ಗೌರವಧನ ನೀಡಲು ತೀರ್ಮಾನಿಸಲಾಗಿದೆ. ಈಗ ₹8000 ದೊರೆಯುತ್ತಿದೆ. ಅವರು ಮಾಡಿದ ಕೆಲಸದ ಅನ್ವಯ ಭತ್ಯೆ ದೊರೆಯುತ್ತಿದೆ. ಭತ್ಯೆ ಸೇರಿ ಒಟ್ಟು ಮೊತ್ತ ₹10000ದಷ್ಟು ಆಗದೇ ಇದ್ದರೆ ಬಾಕಿ ಮೊತ್ತವನ್ನು ಸರ್ಕಾರವೇ ಭರಿಸಲಿದೆ. ಸರ್ಕಾರದ ಈ ನಿರ್ಧಾರವನ್ನು ಆಶಾ ಕಾರ್ಯಕರ್ತೆಯರು ಒಪ್ಪಿಕೊಂಡಿದ್ದಾರೆ. ಧರಣಿ ಹಿಂಪಡೆದಿದ್ದಾರೆ.
* ಭತ್ಯೆ ಒಳಗೊಂಡು ಮಾಸಿಕ ₹10000 ನಿಶ್ಚಿತ ಗೌರವಧನ ಏಪ್ರಿಲ್ನಿಂದ ಜಾರಿ
* ಆಶಾ ಕಾರ್ಯಕರ್ತೆಯರಿಗೆ ತಿಂಗಳ ರಜೆ ನೀಡಲು ಸಮ್ಮತಿ
* ಗಂಭೀರ ಆರೋಗ್ಯದ ಸಮಸ್ಯೆ ಸಂದರ್ಭದಲ್ಲಿ ಗೌರವಧನ ಸಹಿತ ರಜೆ ನೀಡುವ ಬಗ್ಗೆ ಪರಿಶೀಲನೆ
* ನಿವೃತ್ತಿ ಪರಿಹಾರ ನೀಡುವ ಬಗ್ಗೆ ಪರಿಶೀಲನೆ