ನವದೆಹಲಿ : 75ವರ್ಷಕ್ಕೆ ನಿವೃತ್ತಿ ಕಡ್ಡಾಯವಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ನಿವೃತ್ತಿ ಚರ್ಚೆಗೆ ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ತೆರೆ ಎಳೆದಿದ್ದಾರೆ.
ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗೆಯೇ 75ನೇ ವಯಸ್ಸಿನಲ್ಲೇ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಚರ್ಚೆಯಾಗಿತ್ತು. ಆದರೆ ಇದೀಗ ಎಲ್ಲಾ ಊಹಾಪೋಹಗಳಿಗೆ ಮೋಹನ್ ಭಾಗವತ್ ತೆರೆ ಎಳೆದಿದ್ದಾರೆ. ಸ್ವತಃ ಭಾಗವತ್ ಅವರು ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿಯವರಿಗಿಂತ ಆರು ದಿನ ಮುಂಚಿತವಾಗಿ 75ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ.
75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಹೇಳಿದ್ದಾರೆ. ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ನಡೆದ ಒಂದು ಸಮಾರಂಭದಲ್ಲಿ ಮಾತನಾಡಿ, 75 ವರ್ಷ ವಯೋಮಿತಿಯ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಭಾಗವತ್ ಅವರು ಆರ್ಎಸ್ಎಸ್ನ ಶತಮಾನೋತ್ಸವದ ಸಮಾರಂಭದಲ್ಲಿ ಮಾತನಾಡುತ್ತಾ, ಬಿಜೆಪಿ ಮತ್ತು ಆರ್ಎಸ್ಎಸ್ ನಡುವೆ ಭಿನ್ನಾಭಿಪ್ರಾಯಗಳು ಇರಬಹುದು ಆದರೆ ಸಂಘರ್ಷ ಇಲ್ಲ ಎಂದು ಹೇಳಿದರು. ಎರಡೂ ಸಂಘಟನೆಗಳು ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿವೆ ಎಂದು ಅವರು ಸ್ಪಷ್ಟಪಡಿಸಿದರು.