ದಾವಣಗೆರೆ; ದಾವಣಗೆರೆ ಜಿಲ್ಲೆ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಅಭಿವೃದ್ದಿ ಪಥದಲ್ಲಿ ಸದಾ ಮುನ್ನೆಡೆಯುತ್ತಿತ್ತು, ಆದರೆ ಅಭಿವೃದ್ದಿ ಪಥದಿಂದ ಹಿಮ್ಮುಖವಾಗಿದ್ದು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಸುಧಾರಣೆ ಸೇರಿದಂತೆ ವಸತಿ ಸೌಲಭ್ಯ ಮತ್ತು ನೀರಾವರಿ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಜಿಲ್ಲೆಯನ್ನು ಅಭಿವೃದ್ದಿ ಪಥದ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಅಧಿಕಾರಿಗಳು ಶ್ರಮವಹಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 5 ವರ್ಷಗಳ ಹಿಂದೆ ಅನೇಕ ಕ್ಷೇತ್ರದಲ್ಲಿ ಜಿಲ್ಲೆ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಮುಂದೆ ಇರುತ್ತಿತ್ತು. ಆಡಳಿತದ ಬದಲಾವಣೆಯಿಂದ ಜಿಲ್ಲೆ ಅಭಿವೃದ್ದಿಯಿಂದ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಜಿಲ್ಲೆಗೆ ಸಂಬಂಧಿಸಿದ ಕೆಲಸಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಡಲಾಗುತ್ತದೆ ಎಂದರು.
ಭ್ರಷ್ಟಾಚಾರ ಮುಕ್ತ ಆಡಳಿತ; ಯಾವುದೇ ಇಲಾಖೆ ಅಧಿಕಾರಿಗಳು ಕೆಲಸ ಮಾಡುವುದರಲ್ಲಿ ಭ್ರಷ್ಟಾಚಾರ ಮುಕ್ತರಾಗಿರಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರವಾದ ಯೋಜನೆಗಳಾಗಿದ್ದು ಆಯವ್ಯಯದಲ್ಲಿ ಎಲ್ಲಾ ಐದು ಯೋಜನೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಟಾನ ಮಾಡಬೇಕಾಗಿದ್ದು ವಿಶೇಷವಾಗಿ ಇನ್ನೂ ಹಲವಾರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಾಗ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜನರ ಆರೋಗ್ಯ ಕಾಪಾಡಿ; ಕೊರೋನಾ ಸಂದರ್ಭದಲ್ಲಿ ಜನರ ಜೀವಗಳೊಂದಿಗೆ ಚೆಲ್ಲಾಟವಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಇಲಾಖೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕಾಗಿದೆ. ಜನರಿಗೆ ಆರೋಗ್ಯ ಸುರಕ್ಷತೆಗೆ ನೀಡಲಾಗಿರುವ ಎಬಿಆರ್‍ಕೆ ಕಾರ್ಡ್ ವಿತರಣೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ರೆಫರಲ್ ಸಕಾಲದಲ್ಲಿ ನೀಡಬೇಕು. ಅಂಬುಲೆನ್ಸ್ ಸೇವೆ ಅಗತ್ಯವಿರುವವರಿಗೆ ಸಿಗುವಂತಿರಬೇಕು. ಸಿ.ಜಿ. ಆಸ್ಪತ್ರೆಯಲ್ಲಿ ಎಂ.ಆರ್.ಐ.ಸ್ಕ್ಯಾನಿಂಗ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ ನೀಡಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಗ್ರಾಮಾಂತರ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕರ್ತವ್ಯ ನಿರತರಾಗಿರುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಈ ವೇಳೆ ಚನ್ನಗಿರಿ ಶಾಸಕರಾದ ಬಸವರಾಜ್ ವಿ.ಶಿವಗಂಗ ಅವರು ಮಾತನಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚೀಟಿ ಬರೆಯುವ ಪದ್ದತಿ ಇದೆ. ಇತ್ತೀಚೆಗೆ ಸಂತೆಬೆನ್ನೂರಿಗೆ ಭೇಟಿ ನೀಡಿದ ವೇಳೆ ಚಿಕಿತ್ಸೆಗೆ ಬಂದವರಿಗೆ ಚೀಟಿ ಬರೆದು ಹೊರಗೆ ಔಷಧ ತರಲು ತಿಳಿಸಿರುವುದನ್ನು ನೋಡಲಾಗಿದೆ. ಈ ರೀತಿ ಆಗದಂತೆ ನೋಡಿಕೊಂಡು ಅಗತ್ಯವಿರುವ ಔಷಧವನ್ನು ಸರ್ಕಾರದಿಂದಲೇ ಖರೀದಿಸಲು ಶಾಸಕರು ತಿಳಿಸಿದರು.
ಡಯಾಲೀಸಿಸ್ ಕೇಂದ್ರಗಳ ಹೆಚ್ಚಳ; ಈ ಭಾರಿಯ ಬಜೆಟ್‍ನಲ್ಲಿ ಹೊನ್ನಾಳಿ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಡಯಾಲೀಸಿಸ್ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಸಿಜೆ ಆಸ್ಪತ್ರೆಯಲ್ಲಿರುವ ಡಯಾಲೀಸಿಸ್ ಘಟಕದಲ್ಲಿ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂಬ ದೂರುಗಳಿದ್ದು ಇದನ್ನು ಸರಿಪಡಿಸಲು ಜಿಲ್ಲಾ ಸರ್ಜನ್‍ಗೆ ಸೂಚನೆ ನೀಡಿದರು.
ಇದೇ ವೇಳೆ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಸರ್ಕಾರದ ಅಂಬುಲೆನ್ಸ್ ಇದ್ದರೂ ಸಹ ಖಾಸಗಿ ಹಾವಳಿಯಿಂದ ಬಡವರಿಗೆ ಅಂಬುಲೆನ್ಸ್ ಸೇವೆ ದುಬಾರಿಯಾಗಿದೆ. ಸರ್ಕಾರದ ಅಂಬುಲೆನ್ಸ್ ಇದ್ದಲ್ಲಿ ಬಡವರಿಗೆ ಅನುಕೂಲವಾಗಲಿದೆ. ಸಿಜೆ ಆಸ್ಪತ್ರೆ ಅಂಬುಲೆನ್ಸ್ ಇದ್ದರೂ ಸಕಾಲದಲ್ಲಿ ಸಿಗುವುದಿಲ್ಲ. ಆದರೆ ಅಲ್ಲಿಯವರೇ ಖಾಸಗಿ ಅಂಬುಲೆನ್ಸ್ ಪಡೆಯಲು ಹೇಳುತ್ತಾರೆ, ಇದು ಬಡವರಿಗೆ ಆರ್ಥಿಕವಾಗಿ ಬಹಳ ಹೊರೆಯಾಗಲಿದ್ದು 10 ರಿಂದ 16 ಸಾವಿರದ ವರೆಗೆ ವೆಚ್ಚ ಬರಲಿದೆ. ಮತ್ತು ಮರಣ ಹೊಂದಿದಾಗ ತೆಗೆದುಕೊಂಡು ಹೋಗಲು ಸಹ ಯಾವುದೇ ಅಂಬುಲೆನ್ಸ್ ಇಲ್ಲ, ನಾನೇ ರೂ.3 ಲಕ್ಷ ಕೊಟ್ಟು ರಿಪೇರಿ ಮಾಡಿಸಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ ಶಾಸಕರು ಸಿಜೆ ಆಸ್ಪತ್ರೆ ಆವರಣದಲ್ಲಿ ಖಾಸಗಿ ಅಂಬುಲೆನ್ಸ್‍ಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದರು.
ಕೃಷಿ ಅಧಿಕಾರಿಗಳ ಕ್ಷೇತ್ರ ಭೇಟಿಗೆ ಸೂಚನೆ; ಕೃಷಿ ಇಲಾಖೆ ಅಧಿಕಾರಿಗಳು ಕೇವಲ ಬಿತ್ತನೆ ಬೀಜ, ರಸಗೊಬ್ಬರ, ಸಬ್ಸೀಡಿ ನೀಡುವುದಲ್ಲ, ಅಧಿಕಾರಿಗಳು ರೈತರ ತಾಕುಗಳಿಗೆ ಭೇಟಿ ನೀಡಿ ಅವರು ಬೆಳೆದ ಬೆಳೆಗಳನ್ನು ವೀಕ್ಷಣೆ ಮಾಡಿ ಅವರಿಗೆ ಅಗತ್ಯವಿರುವ ತಾಂತ್ರಿಕ ಸಲಹೆಯನ್ನು ಕ್ಷೇತ್ರ ಮಟ್ಟದಲ್ಲಿ ನೀಡಬೇಕು. ಕೃಷಿ ಅಧಿಕಾರಿಗಳು ರೈತರ ಬಳಿ ತೆರಳಿ ಯಾವ ಬೆಳೆ ಬೆಳೆಯುತ್ತಿದ್ದಾರೆ, ಅವರು ಉಪಯೋಗಿಸುವ ಗೊಬ್ಬರ, ಬಿತ್ತನೆ ಬೀಜಗಳ ಮಾಹಿತಿಯನ್ನು ನೀಡಬೇಕು. ಮತ್ತು ಹೊಸ ಹೊಸ ತಾಂತ್ರಿಕತೆಯನ್ನು ರೈತರಿಗೆ ಪರಿಚಯಿಸುವ ಕೆಲಸವನ್ನು ಮಾಡಲು ತಿಳಿಸಿ ಜಿಲ್ಲೆಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ಗೊಬ್ಬರದ ದಾಸ್ತಾನು ಇಟ್ಟುಕೊಂಡು ಕಳಪೆ ಬಿತ್ತನೆ ಬೀಜ ಮಾರಾಟವಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ರಾಗಿ ಖರೀದಿ ಹಣ ನೀಡಲು ರೂ.8 ಕೋಟಿ; ಬೆಂಬಲ ಬೆಲೆಯಲ್ಲಿ ಜಗಳೂರು ಕೇಂದ್ರದಲ್ಲಿ ರಾಗಿ ಖರೀದಿಸಿದ ರೈತರಿಗೆ ಹಣ ನೀಡಲು ಸರ್ಕಾರದಿಂದ ರೂ.8 ಕೋಟಿ ಬಿಡುಗಡೆಯಾಗಿದೆ. ಇಲ್ಲಿ ರಾಗಿ ಖರೀದಿ ವೇಳೆ ಅಕ್ರಮವೆಸಗಲಾಗಿದೆ ಎಂದು ದೂರಿನ ಹಿನ್ನಲೆಯಲ್ಲಿ 489 ರೈತರ ವಿವರವನ್ನು ಮರುಪರಿಶೀಲಿಸಲು ನಿರ್ದೇಶಿಸಲಾಗಿದ್ದು ಪರಿಶೀಲಿಸಿ ಹಣ ಪಾವತಿಗೆ ಕ್ರಮ ವಹಿಸಲಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಈ ವೇಳೆ ಜಗಳೂರು ಶಾಸಕರಾದ ದೇವೇಂದ್ರಪ್ಪನವರು ಮುಖ್ಯಮಂತ್ರಿಗಳು ಹಾಗೂ ಆಹಾರ ಸಚಿವರು ಹಣ ಬಿಡುಗಡೆಗೆ ಆದೇಶಿಸಿದ್ದಾರೆ. ಖರೀದಿ ಕೇಂದ್ರದಲ್ಲಿ ಅಕ್ರಮವೆಸಗಿದ ಅಧಿಕಾರಿಗಳು, ಮಧ್ಯಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. 7 ಸಾವಿರ ರೈತರಿದ್ದಾರೆ ಆದರೆ 13 ಸಾವಿರ ರೈತರ ಪಹಣಿಯಲ್ಲಿ ರಾಗಿ ಬೆಳೆದಿದ್ದಾರೆ ಎಂಬ ಅಂಕಿ ಅಂಶಗಳಿವೆ. ಈ ಪ್ರಕರಣದಿಂದ ಮುಂದಿನ ದಿನಗಳಲ್ಲಿ ರೈತರಿಗೆ ಅನ್ಯಾಯವಾಗಬಾರದು. ಆದ್ದರಿಂದ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಮತ್ತು ರೈತರಿಗೆ ನ್ಯಾಯ ಸಿಗಬೇಕೆಂದರು.
ಸಭೆಯಲ್ಲಿ ಹರಿಹರ ಶಾಸಕರಾದ ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಡಾ; ಅರುಣ್.ಕೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.