ಚಿತ್ರದುರ್ಗ: ಚಿತ್ರದುರ್ಗದ ವಿಭಾಗದ ವಲಯ ಅರಣ್ಯಾಧಿಕಾರಿ ವಸಂತಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅಧಿಕಾರ ವ್ಯಾಪ್ತಿ ಮೀರಿ ಕಬ್ಬಿಣದ ಅದಿರು ತುಂಬಿದ ಲಾರಿಗಳನ್ನು -ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿದ ಆರೋಪದ ಮೇಲೆ ಅಮಾನತ್ತು ಮಾಡಲಾಗಿದೆ.
ಹೊಳಲ್ಕೆರೆ ತಾಲ್ಲೂಕು ದಿಂಡದಹಳ್ಳಿ ಸರ್ವೆ ನಂಬರ್ 38ರಲ್ಲಿ ದಾಸ್ತಾನಾಗಿದ್ದ ಕಬ್ಬಿಣದ ಅದಿರಿನ ಮೇಲಿನ ಮರ ಕಡಿಯುವಂತಿಲ್ಲ ಎಂಬ ಷರತ್ತು ವಿಧಿಸಿ ಸಾಯಿ ಬಾಲಾಜಿ ಸ್ಪಾಂಜ್ ಐರನ್ ಇಂಡಿಯಾ ಕಂಪನಿಗೆ, ಅನುಮತಿ ನೀಡಲಾಗಿತ್ತು, ಆದರೆ ಗಣಿ ಕಂಪನಿಯವರು ಮರ ಕಡಿದು ಕಬ್ಬಿಣ ಅದಿರು ಸಾಗಿಸಿದ್ದರು. ಅದಿರು ತುಂಬಿದ್ದ 5 ಲಾರಿಗಳನ್ನು ವಸಂತಕುಮಾರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.
ಕಬ್ಬಿಣದ ಅದಿರು ದಾಸ್ತಾನು ಪ್ರದೇಶ ಹೊಳಲ್ಕೆರೆ ತಾಲ್ಲೂಕು ಕಾರ್ಯ ವ್ಯಾಪ್ತಿಗೆ ಬರುವ ಕ್ಷೇತ್ರವಾಗಿದೆ. ಆದರೆ ಚಿತ್ರದುರ್ಗ ವ್ಯಾಪ್ತಿಯ ಆರ್‌ಎಫ್‌ಒ ವಸಂತಕುಮಾರ್ ಪ್ರಕರಣ ದಾಖಲು ಮಾಡಿರುವುದು ಕರ್ತವ್ಯ ಲೋಪವಾಗಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವರದಿ ನೀಡಿದ್ದರು.
ಈ ವರದಿ ಆಧರಿಸಿ ಇಲಾಖಾ ತನಿಖೆಯನ್ನು ಕಾಯ್ದಿರಿಸಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ ಪಾಟೀಲ ಅವರು ವಸಂತ್ ಕುಮಾರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.