ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ದಿ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಫೈರಿಂಗ್ (Ricky Rai Shoot out) ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಗನ್ ಮ್ಯಾನ್ (gun man) ವಿಠಲ್‌ನನ್ನು ಪೊಲೀಸರು ಬಂಧಿಸಿದ್ದು, ಆತ ಪ್ರಕರಣದ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಈ ಮೊದಲು, ಗನ್ ಮ್ಯಾನ್ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಸಂಶಯಿಸಿದ್ದರು. ಇದೀಗ, ರಿಕ್ಕಿ ರೈ ತನ್ನನ್ನು ತಾನೇ ಶೂಟ್ ಮಾಡಿಕೊಂಡಿದ್ದಾನೆ ಎಂದು ಗನ್ ಮ್ಯಾನ್ ಹೇಳಿಕೆ ನೀಡಿದ್ದಾನೆ.
ಸಾಕಷ್ಟು ಅನುಮಾನ ಉಂಟಾಗಿದ್ದರಿಂದ ರಿಕ್ಕಿ ರೈ ಗನ್ ಮ್ಯಾನ್ ವಿಠಲ್‌ನನ್ನು ರಾಮನಗರ ಜಿಲ್ಲೆಯ ಪೊಲೀಸರು ಬಂಧಿಸಿದ್ದರು. ಬಳಿಕ ರಾಮನಗರ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ವೇಳೆ ಪೊಲೀಸರು ವಿಠಲ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ದೊರೆತಿದೆ. ಪೊಲೀಸರು ಆತನಿಂದ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಇದರೊಂದಿಗೆ, ರಿಕ್ಕಿ ರೈ ಶೂಟೌಟ್‌ನ ನಾಟಕವಾಡುತ್ತಿದ್ದಾನಾ ಎಂಬ ಬಗ್ಗೆ ಪೊಲೀಸರು ತಾಳಿದ್ದ ಅನುಮಾನ ನಿಜವಾಗುತ್ತಿರುವಂತಿದೆ.
ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ಹಾಗೂ ಉದ್ಯಮಿ ರಿಕ್ಕಿ ರೈ ಮೇಲೆ ಕಳೆದ ಶುಕ್ರವಾರ ರಾತ್ರಿ (ಏಪ್ರಿಲ್ 18) ರಾಮನಗರದ ಬಿಡದಿ ಬಳಿ ಫೈರಿಂಗ್ ನಡೆದಿತ್ತು. ರಾತ್ರಿ 11:30ರ ಸುಮಾರಿಗೆ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ರಿಕ್ಕಿ ಮೂಗು ಹಾಗೂ ಕೈಗಳಿಗೆ ಗಾಯಗಳಾಗಿತ್ತು. ಬಳಿಕ ಆತನನ್ನು ಬೆಂಗಳೂರಿನ ಹೆಚ್ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೊಲೀಸರಿಗೆ ಶೂಟೌಟ್ ನಡೆದ ಸ್ಥಳದಲ್ಲಿ ಸಿಕ್ಕಿರುವ ಬುಲೆಟ್, ವಿಠಲ್ ಬಳಿ ಇದ್ದ ಗನ್‌ನ ಬುಲೆಟ್ ಎಂದು ಗೊತ್ತಾಗಿತ್ತು. ಪೊಲೀಸರು ಈತನ ಗನ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಸ್ಪಷ್ಟ ತೀರ್ಮಾನ ನೀಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಗನ್ ಅನ್ನು ಕಳುಹಿಸಿದ್ದರು. ತಜ್ಞ ವರದಿ ಇನ್ನೂ ಬರಬೇಕಾಗಿದೆ. ಮುತ್ತಪ್ಪ ರೈ ಬಳಿ ಗನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವಿಠಲ್ ಕೆಲಕಾಲ ರಿಕ್ಕಿ ರೈಗೂ ಗನ್‌ಮ್ಯಾನ್ ಆಗಿದ್ದ. ಆರೋಗ್ಯ ಸರಿ ಇಲ್ಲದ ಕಾರಣ ಗನ್ ಮ್ಯಾನ್ ಕೆಲಸ ಬಿಟ್ಟು ಮನೆಯಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಮುತ್ತಪ್ಪ ರೈ ಸಾಯುವ ಮುನ್ನ ಈತನಿಗೆ ನಿವೇಶನ ನೀಡುವುದಾಗಿ ಹೇಳಿದ್ದರು. ಆದರೆ, ರಿಕ್ಕಿ ರೈ ಸೈಟ್ ಕೊಡಲು ನಿರಾಕರಿಸಿದ್ದ. ಈ ಕಾರಣಕ್ಕೆ ವಿಠಲ್ ಕೋಪಗೊಂಡಿರಬಹುದು ಎಂದು ಮೊದಲು ಸಂಶಯಿಸಲಾಗಿತ್ತು.
ಈ ನಡುವೆ, ರಿಕ್ಕಿ ರೈ ಗನ್ ಮ್ಯಾನ್ ನೀಡಿದ ದೂರಿನಲ್ಲಿ ಮೂವರನ್ನು ಹೆಸರಿಸಿದ್ದು, ಮೂವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಇವರ ಪಾತ್ರ ದೃಢಪಡಿಸಲು ಯಾವುದೇ ಸಾಕ್ಷಿ ಕಂಡುಬಂದಿಲ್ಲವಾದ್ದರಿಂದ ಯಾರನ್ನೂ ಬಂಧಿಸಿಲ್ಲ. ಮುತ್ತಪ್ಪ ರೈ ಮಾಜಿ ಸಹಚರ, ಮೊದಲ ಆರೋಪಿ ರಾಕೇಶ್ ಮಲ್ಲಿ ಹಾಗೂ ಮೂರನೇ ಆರೋಪಿ ನಿತೀಶ್ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿ ಬಿಟ್ಟು ಕಳಿಸಲಾಗಿದೆ. ಎರಡನೇ ಆರೋಪಿ, ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ವಿದೇಶದಲ್ಲಿದ್ದಾರೆ.