ಹನುಮಾನ್’ ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದರೂ, ಅದರ ಮುಂದುವರಿದ ಭಾಗದ ಬಗ್ಗೆ ಯಾವುದೇ ಪ್ರಮುಖ ಅಪ್ಡೇಟ್ಸ್ ಹೊರಬಿದ್ದಿರಲಿಲ್ಲ.
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ, ಅಭಿಮಾನಿಗಳಿಗೆ ಶೀಘ್ರವೇ ಬಿಗ್ ಸರ್ಪ್ರೈಸ್ ಸಿಗುವ ಸಾಧ್ಯತೆಯಿದೆ. ‘ಜೈ ಹನುಮಾನ್’ ಶೀರ್ಷಿಕೆಯ ಸೀಕ್ವೆಲ್ನ ವಿಶೇಷ ವಿಡಿಯೋ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
300 ಕೋಟಿ ಕಲೆಕ್ಷನ್ ಮಾಡಿದ್ದ ಮೊದಲ ಭಾಗ: 2024ರ ಜನವರಿಯಲ್ಲಿ ಬಿಡುಗಡೆಯಾದ ಹನುಮಾನ್ ಚಿತ್ರ ತೆಲುಗು ಮತ್ತು ಹಿಂದಿ ರಾಜ್ಯಗಳಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದೆ. 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಸರಿ-ಸಮಾರು 300 ಕೋಟಿ ರೂ. ಸಂಗ್ರಹಿಸಿದೆ. ಈ ಯಶಸ್ಸಿನ ಹಿನ್ನೆಲೆ, ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆಗಳಿವೆ.
ಬ್ಲಾಕ್ಬಸ್ಟರ್ ‘ಕಾಂತಾರ’ ಚಿತ್ರದ ಮೂಲಕ ದೇಶಾದ್ಯಂತ ಜನಪ್ರಿಯರಾಗಿರುವ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಅವರೀಗ ‘ಜೈ ಹನುಮಾನ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹಿನ್ನೆಲೆ, ಸಿನಿಮಾ ಮತ್ತು ಕಥಾಹಂದರದ ಸುತ್ತಲಿನ ಕುತೂಹಲ ಹೆಚ್ಚಾಗಿದೆ. ಚಿತ್ರ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೆಚ್ಚಿನ ಹೈಪ್ ಪಡೆಯಲಿದೆ. ‘ಹನುಮಾನ್’ ಚಿತ್ರದ ಮೊದಲ ಭಾಗದಲ್ಲಿ ನಾಯಕನಾಗಿ ತೇಜ ಸಜ್ಜಾ ಪ್ರೇಕ್ಷಕರನ್ನು ಮೆಚ್ಚಿಸಿದ್ದರು. ಮುಂದುವರಿದ ಭಾಗದಲ್ಲಿ ರಿಷಬ್ ಅವರು ಎಷ್ಟು ಶಕ್ತಿಶಾಲಿಯಾಗಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲವಿದೆ.
ವಿಡಿಯೋ ರಿಲೀಸ್ ಯಾವಾಗ? ಜುಲೈ 7ರಂದು ನಾಯಕ ನಟ ರಿಷಬ್ ಶೆಟ್ಟಿ 42ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಂದು ತಯಾರಕರು ತಮ್ಮ ಚಿತ್ರದ ವಿಶೇಷ ವಿಡಿಯೋ ಅನಾವರಣಗೊಳಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಭಿಮಾನಿಗಳು ಅಫೀಶಿಯಲ್ ಅನೌನ್ಸ್ಮೆಂಟ್ ನಿರೀಕ್ಷಿಸಿದ್ದಾರೆ
‘ಜೈ ಹನುಮಾನ್’ ಚಿತ್ರವನ್ನು ಭೂಷಣ್ ಕುಮಾರ್ ಪ್ರಸ್ತುತಪಡಿಸುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಬಹಳ ಪ್ರತಿಷ್ಠೆಯಿಂದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತೇಜ ಸಜ್ಜಾ ಚಿತ್ರದ ಮುಂದುವರಿದ ಭಾಗದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಸಂದರ್ಶನವೊಂದರಲ್ಲಿ ನಟ ಇದನ್ನು ಸ್ಪಷ್ಟಪಡಿಸಿದ್ದರು.