ಭುವನೇಶ್ವರ: ಯುಪಿಎಸ್ಸಿ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಕೆಲ ಅಭ್ಯರ್ಥಿಗಳು ಮೊದಲ ಪ್ರಯತ್ನದಲ್ಲಿ, ಇನ್ನೂ ಕೆಲವರು ಎರಡು ಅಥವಾ ಮೂರನೇ ಪ್ರಯತ್ನದಲ್ಲಿ ಅಥವಾ ಕೆಲ ಪ್ರಯತ್ನಗಳ ಬಳಿಕ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ತಮ್ಮ ಮೂರನೇ ಪ್ರಯತ್ನದಲ್ಲಿ ಉತ್ತೂರ್ಣರಾದ ರಿತಿಕಾ ರಾತ್ ಅವರ ಯಶಸ್ಸಿನ ಕಥೆ ಇದು.
ಭುವನೇಶ್ವರದವರಾದ ರಿತಿಕಾ, ಅವರ ತಂದೆ ಶಿಶಿರ್ ರಾಥೋಡ್ ಅವರು ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿಯಾಗಿದ್ದು, ಆಡಳಿತ ಮತ್ತು ಸಾರ್ವಜನಿಕ ಸೇವೆಯ ಬಗ್ಗೆ ರಿತಿಕಾ ಅವರಿಗೆ ಆಸಕ್ತಿ ಮೂಡಲು ಅವರೇ ಪ್ರೇರಣೆಯಾಗಿದ್ದರು.
ರಿತಿಕಾ ಅವರು ಐಐಎಂ ಇಂದೋರ್ನ ಹಳೆಯ ವಿದ್ಯಾರ್ಥಿನಿ. ಐಐಎಂ ನಲ್ಲಿ ಮ್ಯಾನೇಜ್ಮೆಂಟ್ ಪದವಿ ಮುಗಿಸಿದ ನಂತರ, ಅವರು ಸ್ವಲ್ಪ ಕಾಲ ವೃತ್ತಿಜೀವನದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಳ್ಳಲು ಅವರು ಕೆಲಸವನ್ನು ಬಿಟ್ಟು ಯುಪಿಎಸ್ಸಿ ಸಿದ್ಧತೆಯಲ್ಲಿ ತೊಡಗಿಕೊಂಡರು.
ರಿತಿಕಾ ಅವರು ಯುಪಿಎಸ್ಸಿ ಪರೀಕ್ಷೆಗೆ ತಮ್ಮ ಐಚ್ಛಿಕ ವಿಷಯವಾಗಿ ತತ್ವಶಾಸ್ತ್ರವನ್ನು ಆರಿಸಿಕೊಂಡಿದ್ದರು. ಅದು ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಪರೀಕ್ಷಾ ಸಿದ್ಧತೆಯ ವೇಳೆ ಅವರು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಶಿಸ್ತಿನ ದಿನಚರಿಯನ್ನು ಪಾಲಿಸುತ್ತಿದ್ದರು. 2024ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ರಿತಿಕಾ ಅವರು 48ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು.

































