ಲಕ್ನೋ : ಪ್ರತಿ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಕೆಲವರು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ಸತತ ಮೂರು ಪ್ರಯತ್ನಗಳ ನಂತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಿಯಾ ಸೈನಿ ಅವರ ಯಶೋಗಾಥೆ ಇದು.
ಮುಜಫರ್‌ನಗರದ ಚರ್ಥಾವಲ್‌ನ ತಾಂಡಾ ಗ್ರಾಮದ ನಿವಾಸಿ ರಿಯಾ ಸೈನಿ ಅವರ ತಂದೆ ಮುಖೇಶ್ ಕುಮಾರ್ ಅವರು ದೆಹಲಿಯಲ್ಲಿ ಮಿಲಿಟರಿಯ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಕೆಯ ತಾಯಿ ಪ್ರೀತಿ ಸೈನಿ ಗೃಹಿಣಿ ಮತ್ತು ಆಕೆಯ ತಮ್ಮ ಅನ್ಮೋಲ್ ರಾಷ್ಟ್ರಮಟ್ಟದ ಲಾನ್ ಟೆನಿಸ್ ಆಟಗಾರ. ಅನ್ಮೋಲ್ ಇತ್ತೀಚೆಗೆ ತಮ್ಮ ಇಂಟರ್ಮೀಡಿಯೇಟ್ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಈಗ ಇಂಜಿನಿಯರಿಂಗ್‌ಗೆ ತಯಾರಿ ನಡೆಸುತ್ತಿದ್ದಾರೆ.
ಐಎಎಸ್ ಅಧಿಕಾರಿಯಾಗಬೇಕೆಂಬುದು ರಿಯಾ ಅವರ ಕನಸಾಗಿತ್ತು. ಹೀಗಾಗಿ ಇಂಜಿನಿಯರಿಂಗ್ ಪದವಿ ಪಡೆದ ನಂತರ ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಯುಪಿಎಸ್‌ಸಿ ಪರೀಕ್ಷೆಗೆ ಸಮಾಜಶಾಸ್ತ್ರವನ್ನು ತಮ್ಮ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡರು.
ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ರಿಯಾ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. 2023 ರಲ್ಲಿ ಎರಡನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, ಲಕ್ನೋದಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವೆಗೆ ಆಯ್ಕೆಯಾಗಿದ್ದರು. ಆದರೆ ಐಎಎಸ್ ಅಧಿಕಾರಿಯಾಗುವುದು ಅವರ ಗುರಿಯಾದ ಕಾರಣ 2024 ರಲ್ಲಿ ಮತ್ತೊಮ್ಮೆ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ 22ನೇ ರ‍್ಯಾಂಕ್ ಗಳಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.
ಇನ್ನು ಅಂತಿಮ ಹುದ್ದೆಗಳನ್ನು ಘೋಷಿಸಿದ ನಂತರ ಉತ್ತರ ಪ್ರದೇಶ ಅಥವಾ ಮಹಾರಾಷ್ಟ್ರ ಕೇಡರ್ ಸಿಗುವ ನಿರೀಕ್ಷೆಯಿದೆ ಎಂದು ರಿಯಾ ತಿಳಿಸಿದ್ದಾರೆ.