ಬೆಂಗಳೂರು: ಕರ್ನಾಟಕದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಶಾಲೆಗಳು ಬಾಗಿಲು ತೆರೆದಿದ್ದು, ತರಗತಿಗಳು ಪ್ರಾರಂಭಗೊಂಡಿವೆ. ಈಗ ಆರ್‌ಟಿಇ ಅಡಿ ಶಾಲಾ ದಾಖಲಾಗಿ ಪ್ರವೇಶದ ದಿನಾಂಕವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ 2024-25ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ದಿನಾಂಕ ವಿಸ್ತರಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.
2024-25ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪವೇಶ ಪ್ರಕ್ರಿಯೆ ನಡೆಸಲು ಸುತ್ತೋಲೆಯನ್ವಯ ಕ್ರಮವಹಿಸಲಾಗಿದೆ. ಕಾರ್ಯಸೂಚಿಯನ್ವಯ ಆರ್.ಟಿ.ಇ ಅಡಿ ಮೊದಲ ಸುತ್ತಿನ ಆನ್‌ಲೈನ್ ಲಾಟರಿ ಪ್ರಕ್ರಿಯೆಯನ್ನು 5/6/2024ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು.
ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಆರ್.ಟಿ.ಇ ಮೊದಲ ಸುತ್ತಿನ ಆನ್‌ಲೈನ್ ಲಾಟರಿ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ದಿನಾಂಕ 07/06/2024ರಂದು ನಡೆಸಲಾಗುವುದು. ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಸುತ್ತೋಲೆ ಮಾಹಿತಿ ನೀಡಿದೆ.
ಪರಿಷ್ಕೃತ ವೇಳಾಪಟ್ಟಿ
* ಆನ್ ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ 7/6/2024. ಆಯಕ್ತರ ಕಛೇರಿ ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು. ಎನ್‌ಐಸಿ ಹಾಗೂ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಸೆಂಟರ್.
* ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ. 8/6/2024 ರಿಂದ 19/6/2024. ಸಂಬಂಧಿಸಿದ ಪೋಷಕರು, ಶಾಲಾ ಮುಖ್ಯಸ್ಥರು ಮತ್ತು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುಸ್ತುವಾರಿ.
ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ
ಅಪ್‌ಲೋಡ್ ಮಾಡುವುದು. 8/6/2024 ರಿಂದ 20/6/2024. ಸಂಬಂಧಿಸಿದ ಶಾಲಾ ಮುಖ್ಯಸ್ಥರು.
* ಆನ್ ಲೈನ್ ತಂತ್ರಾಂಶದ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ. 25/6/2024. ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು. ಎನ್‌ಐಸಿ, ಇ-ಆಡಳಿತ ಹಾಗೂ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಸೆಂಟರ್.
* ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ. 26/6/2024 ರಿಂದ 2/7/2024. ಸಂಬಂಧಿಸಿದ ಪೋಷಕರು, ಶಾಲಾ ಮುಖ್ಯಸ್ಥರು ಮತ್ತು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು.
* ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸುವುದು. 26/6/2024 ರಿಂದ 3/7/2024 ಸಂಬಂಧಿಸಿದ ಶಾಲಾ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು.
ವಸತಿ ಶಾಲೆಗಳಿಗೂ ಅನ್ವಯ: ಕರ್ನಾಟಕ ಹೈಕೋರ್ಟ್ ಕಳೆದ ವಾರ ವಸತಿ ಶಾಲೆಗಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಐ) 2009 ಕಾಯಿದೆಯ ಅಂಶಗಳು ಅನ್ವಯವಾಗುತ್ತವೆ ಎಂದು ಆದೇಶ ನೀಡಿದೆ. ಇದರಿಂದಾಗಿ ಇನ್ನು ಮುಂದೆ ವಸತಿ ಶಾಲೆಗಳು ನಮಗೆ ಆರ್‌ಟಿಇ ಅನ್ವಯವಾಗುವುದಿಲ್ಲವೆಂದು ಹೇಳಲಾಗದು.
ಅಲ್ಲದೇ ಕೋರ್ಟ್ ತನ್ನ ಆದೇಶದಲ್ಲಿ ಆರ್‌ಟಿಇ ಕಾಯಿದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯಿದೆ ನಿಯಮ 11ರಂತೆ, ನಮೂನೆ-1ರಂತೆ ಸರಕಾರ ಹೊರತುಪಡಿಸಿ ಇತರೆ ಎಲ್ಲಾ ಶಾಲೆಗಳು ಸಕ್ಷಮ ಪ್ರಾಧಿಕಾರದಲ್ಲಿಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಹೇಳಿದೆ.