ಚಿತ್ರದುರ್ಗ: ಸುಮಾರು 97 ವರ್ಷ ಇತಿಹಾಸವಿರುವ ರಾಜ್ಯದ ಅತೀ ಹಳೆಯ ಚಿತ್ರದುರ್ಗದ ಹೆಮ್ಮೆಯ ‘ಮಹಿಳಾ ಸೇವಾ ಸಮಾಜ’ದ ಆಡಳಿತ ಮಂಡಳಿಗೆ ಕಳೆದ 7 ವರ್ಷಗಳಿಂದ ಚುನಾವಣೆ ನಡೆಸದಿರುವ ಕಾರಣ ಉಂಟಾಗಿರುವ ಗೊಂದಲ, ಅವ್ಯವಹಾರ, ಅಧಿಕಾರ ದುರುಪಯೋಗ ಕಾರಣವಾಗಿದೆ ಎಂದು ‘ಮಹಿಳಾ ಸೇವಾ ಸಮಾಜ’ದ ಸದಸ್ಯರದ ರೂಪ ಜನಾರ್ಧನ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳಾ ಸೇವಾ ಸಮಾಜವು ರಾಜ್ಯದಲ್ಲೇ ಅಪರೂಪದ ಮಹಿಳಾ ಸಂಘಟನೆಯಾಗಿದ್ದು ಕಳೆದ 97 ವರ್ಷಗಳಿಂದಲೂ ಅಸ್ಥಿತ್ವದಲ್ಲಿದೆ. ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದ ಸಂಘಟನೆ ಈಗ ಗೊಂದಲದ ಗೂಡಾಗಿದೆ.ಸಂಘದ ಆಡಳಿತ ಮಂಡಳಿಗೆ ಕಳೆದ 7 ವರ್ಷಗಳಿಂದ ಚುನಾವಣೆ ನಡೆಸದ ಕಾರಣ ಭಾರಿ ಮೊತ್ತದ ಅವ್ಯವಹಾರ ನಡೆದಿದೆ. ಆಡಳಿತ ಮಂಡಳಿ ಕೊನೆಗೊಂಡಿದ್ದರೂ ಹಳೇ ಸಮಿತಿಯ ಉಪಾಧ್ಯಕ್ಷರಾದ ಮೋಕ್ಷಾ ರುದ್ರಸ್ವಾಮಿ ಹಾಗೂ ಅವರ ಪರ ಇರುವ ಕೆಲ ಕಮಿಟಿ ಸದಸ್ಯರು ತೆರೆಮರೆಯಲ್ಲಿ ಆಡಳಿತ ಮುಂದುವರಿಸುತ್ತಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ವಹಿವಾಟು ನಡೆಸುತ್ತಿದ್ದು ಸಮಾಜದ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಮಹಿಳಾ ಸೇವಾ ಸಮಾಜಕ್ಕೆ ಜಿಲ್ಲಾಧಿಕಾರಿಗಳ ಪತ್ನಿ ಅಧ್ಯಕ್ಷೆಯಾಗಿರುತ್ತಾರೆ.ಸಂಘಟನೆಗೆ ಐತಿಹಾಸಿಕ ಹಿನ್ನೆಲೆಯಿದ್ದು ಮೈಸೂರು ಮಹಾರಾಜರು ದೂರದೃಷ್ಟಿಯಿಂದ ಮಹಿಳೆಯರ ಪ್ರಗತಿಗಾಗಿ ಭೂಮಿಕೊಟ್ಟಿದ್ದರು. ಒಟ್ಟಾರೆ ಆಸ್ತಿಯ ಮೌಲ್ಯ ಅಂದಾಜು 150 ಕೋಟಿ ರೂ ಇದೆ. 10 ವರ್ಷಗಳ ಹಿಂದೆ ಮಳಿಗೆ ನಿರ್ಮಾಣ ಮಾಡಲಾಗಿದ್ದು ತಿಂಗಳಿಗೆ ಸುಮಾರು 1.5 ಲಕ್ಷ ರೂ ಬಾಡಿಗೆ ಬರುತ್ತದೆ ಇದನ್ನು ಮಹಿಳೆಯರ ವಿವಿಧ ಚಟುವಟಿಕೆ, ತರಬೇತಿಗಳಿಗೆ ವಿನಿಯೋಗಿಸುವ ಉದ್ದೇಶ ಹೊಂದಲಾಗಿದೆ ಆದರೆ ಇಲ್ಲಿಯವರೆಗೆ ಈ ಹಣವನ್ನು ಮಹಿಳೆಯರ ಪ್ರಗತಿಗೆ ವಿನಿಯೋಗಿಸದೇ ದುರುಪಯೋಗವಾಗಿದೆ..
ಲಕ್ಷಾಂತರ ರೂಪಾಯಿ ಬಾಡಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ.ಹಿಂದಿನ ಆಡಳಿತ ಮಂಡಳಿ ಉಪಾಧ್ಯಕ್ಷೆಯಾಗಿರುವ ಮೋಕ್ಷಾ ರುದ್ರಸ್ವಾಮಿ ಅವರ ಅಧಿಕಾರಾವಧಿ ಮುಗಿದಿದ್ದರೂ ಈಗಲೂ ಮಹಿಳಾ ಸಮಾಜದ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಂಡು ತೆರೆಮರೆಯಲ್ಲಿ ತಮ್ಮ ಆಡಳಿತ ನಡೆಸುತ್ತಿದ್ದಾರೆ… ಆಸ್ತಿಯ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಬಿದ್ದಿದೆ ಎಂದರು.
ಮಹಿಳಾ ಸಮಾಜದ ವತಿಯಿಂದ ನಡೆಯುತ್ತಿದ್ದ ಅಬಲಾಶ್ರಮ, ಶಿಶುವಿಹಾರ ಕೂಡ ಸ್ಥಗಿತಗೊಂಡಿದೆ.ಸಮಾಜ ಉಳಿಯಬೇಕು ಎಂಬ ಉದ್ದೇಶದಿಂದ ನಾವು ಕೆಲವು ಸದಸ್ಯರು ಕಳೆದ 1 ವರ್ಷದಿಂದ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದೇವೆ.ಜಿಲ್ಲಾಧಿಕಾರಿ ಕಛೇರಿ, ಸಹಕಾರ ಇಲಾಖೆಯ ಕಛೇರಿ ಸುತ್ತಿದ್ದೇವೆ… ಆದರೂ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ ನಮ್ಮ ಪ್ರತಿ ಪ್ರಯತ್ನವನ್ನೂ ಮೋಕ್ಷಾ ರುದ್ರಸ್ವಾಮಿ ಅವರು ತಡೆಯುತ್ತಾ ಬಂದಿದ್ದಾರೆ. ಮಹಿಳಾ ಸಮಾಜದ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕು ಎಂದು ಸಹಕಾರ ಇಲಾಖೆ ಸಚಿವಾಲಯದಿಂದ ಜಿಲ್ಲಾಧಿಕಾರಿ ಹಾಗೂ ಡಿಆರ್ ಅವರಿಗೆ ಪತ್ರ ಬಂದಿದೆ.90 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕು ಎಂದು ಇಲಾಖೆ ಸೂಚನೆ ನೀಡಿದೆ… ಜೊತೆಗೆ ಜಿಲ್ಲಾಧಿಕಾರಿಗಳು ಕೂಡ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಇಷ್ಟಾದರೂ ಎಲ್ಲಾ ಆದೇಶ, ಸೂಚನೆಗಳನ್ನು ಸ್ಥಗಿತಗೊಳಿಸಿ ಚುನಾವಣೆ ನಡೆಸದಂತೆ ನೋಡಿಕೊಳ್ಳುತ್ತಿದ್ದಾರೆ.. ಜೊತೆಗೆ ಸಮಾಜಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಕೋರಿ ಪತ್ರ ಕಳುಹಿಸಲಾಗಿದೆ ಎಂದು ಹೇಳಿದರು.

































