ಚಿತ್ರದುರ್ಗ : ಅನಧಿಕೃತ ಗೈರು ಹಾಗೂ ಕರ್ತವ್ಯದ ವೇಳೆ ಪಾನಮತ್ತರಾಗಿ ಮೇಲಾಧಿಕಾರಿಗಳೊಂದಿಗೆ ಅನುಚಿತ ವರ್ತನೆ ತೋರಿದ ಯಲ್ಲದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಾಧಿಕಾರಿ ಎಸ್.ಸಿದ್ದೇಶ್ವರ ಅವರನ್ನು ಅಮಾನತುಗೊಳಿಸಿ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಎಸ್.ಸಿದ್ದೇಶ್ವರ ಅವರಿಗೆ ಈ ಕುರಿತು ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಮೇಲಾಧಿಕಾರಿಗಳು ಸೂಚನೆಗಳನ್ನು ಸಹ ನೀಡಿದ್ದರು. ಆದರೂ ಎಸ್.ಸಿದ್ದೇಶ್ವರ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ತೋರಲಿಲ್ಲ. ಆದ ಕಾರಣ ಆಡಳಿತಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನಲೆಯಲ್ಲಿ ಜಿ.ಪಂ.ಸಿಇಓ ಹಾಗೂ ಶಿಸ್ತು ಪ್ರಾಧಿಕಾರದ ಅಧಿಕಾರಿಗಳಾದ ಎಸ್.ಜೆ.ಸೋಮಶೇಖರ್ ಕೆ.ಸಿ.ಎಸ್(ಸಿ.ಸಿ.ಎ) ನಿಯಮಾವಳಿ-1957ರ ನಿಯಮ -10(1)ರ ಅನ್ವಯ ಇಲಾಖೆ ವಿಚಾರಣೆ ಕಾಯ್ದಿರಿಸಿ ಎಸ್.ಸಿದ್ದೇಶ್ವರ ಅವರನ್ನು ಸೇವೆಯಿಂದ ಅಮಾನತ್ತು ಮಾಡಿದ್ದಾರೆ.