ಶಬರಿಮಲೆ: ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು (ಮಕರ ವಿಳಕ್ಕು) ಕಣ್ತುಂಬಿಕೊಳ್ಳಲು ಅಯ್ಯಪ್ಪ ಭಕ್ತರ ದಂಡೇ ಆಗಮಿಸುತ್ತಿದೆ. ಜನಸಂದಣಿಯನ್ನು ನಿಯಂತ್ರಿಸಲು ಶಬರಿಮಲೆ ದರ್ಶನಕ್ಕೆ ಬರುವ ಭಕ್ತರಿಗೆ ಸ್ಪಾಟ್ ಬುಕಿಂಗ್ ಅನ್ನು ಇಂದಿನಿಂದ 5,000ಕ್ಕೆ ಮಿತಿಗೊಳಿಸಲಾಗಿದೆ.
ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಶಬರಿಮಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಕ್ತಾದಿಗಳ ನೂಕುನುಗ್ಗಲು ತಪ್ಪಿಸುವ ನಿಟ್ಟಿನಲ್ಲಿ ಸನ್ನಿಧಾನದನಲ್ಲಿ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ಇಂದಿನಿಂದ ಜ.15ರ ವರೆಗೆ ದಿನಕ್ಕೆ 5000 ಜನರಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.
ಶಬರಿಮಲೆಯಲ್ಲಿ ಹಬ್ಬಹರಿದಿನಗಳಲ್ಲಿ ಜನಸಂದಣಿ ನಿಯಂತ್ರಿಸಲು ಕೇರಳ ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ದೇವಸ್ವಂ ಬೋರ್ಡ್ ಈ ನಿರ್ಧಾರ ಕೈಗೊಂಡಿದೆ.ದೇವಸ್ವಂ ಬೋರ್ಡ್ ವೆಬ್‌ಸೈಟ್‌ನಲ್ಲಿ ಜ.12ರಂದು 60,000, ಜ.13ರಂದು 50,000 ಮತ್ತು ಜ.14ರಂದು 40,000 ಎಂದು ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಅನ್ನು ನಿಗದಿಪಡಿಸಲಾಗಿದೆ. ಮಕರ ಜ್ಯೋತಿ ದಿನ (ಜ.14) ಬೆಟ್ಟದ ಮೇಲೆ ಬಿಡಾರ ಹೂಡದಂತೆ ಭಕ್ತರಿಗೆ ಸಲಹೆ ನೀಡಲಾಗಿದೆ. ಜ.10ರಿಂದಲೇ ಪರ್ಣಶಾಲೆಗಳಲ್ಲಿ ಭಕ್ತರು ಕಾದು ಜ್ಯೋತಿ ದರ್ಶನ ಮಾಡುವುದು ವಾಡಿಕೆ. ಈ ಕಾರಣಕ್ಕಾಗಿ ಮಕರ ವಿಳಕ್ಕು ದಿನದಂದು ಉಂಟಾಗಬಹುದಾದ ಜನಸಂದಣಿ ತಪ್ಪಿಸಲು ಸಿದ್ಧತೆಗಳು ನಡೆಯುತ್ತಿವೆ. ಸ್ಪಾಟ್ ಬುಕ್ಕಿಂಗ್ ಅನ್ನು ಸೀಮಿತಗೊಳಿಸುವುದರ ಜೊತೆಗೆ ನಿಲಕ್ಕಲ್‌ನಲ್ಲಿ ಭಕ್ತರನ್ನು ಪಂಪಾ ನದಿಗೆ ಪ್ರವೇಶಿಸಲು ಅನುಮತಿಸುವ ಮೊದಲು ಪೊಲೀಸರು ತಪಾಸಣೆ ನಡೆಸುತ್ತಾರೆ. ಪರ್ಣಶಾಲೆಯಲ್ಲಿ ಕುಳಿತುಕೊಳ್ಳುವ ಭಕ್ತರ ಅಡುಗೆ ಮತ್ತು ಇತರ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ಮಾರ್ಗಸೂಚಿಗಳನ್ನು ಜಾರಿಗೆ ತರಲಿದ್ದಾರೆ. ಜ್ಯೋತಿ ದರ್ಶನಕ್ಕೆ ಸಜ್ಜಾಗಿರುವ ವಿವಿಧೆಡೆ ಭದ್ರತೆಗಾಗಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿರುವುದು ಪೊಲೀಸರ ಸಿದ್ಧತೆಗಳ ಯಶಸ್ಸಿಗೆ ಮತ್ತು ಸುಗಮ ಮತ್ತು ಸುರಕ್ಷಿತ ದರ್ಶನಕ್ಕೆ ಸಾಕ್ಷಿಯಾಗಿದೆ. ನ.15ರಿಂದ ಈ ವರ್ಷ ಜ.5 ರವರೆಗೆ ತೀರ್ಥಯಾತ್ರೆ ಪ್ರಾರಂಭವಾದಾಗ ದಾಖಲೆಯ 39,02,610 ಅಯ್ಯಪ್ಪ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಇದೇ ಅವಧಿಯಲ್ಲಿ 35,12,691 ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಮಕರವಿಳಕ್ಕು ಆರಂಭವಾದ ಡಿ.30ರಿಂದ ನಿನ್ನೆಯವರೆಗೆ 6,22,849 ಜನರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ರಾಜ್ಯ ಪೊಲೀಸ್ ಮಾಧ್ಯಮ ಕೇಂದ್ರದ ಉಪ ನಿರ್ದೇಶಕ ಎಸ್.ಆರ್.ಪ್ರವೀಣ್ ತಿಳಿಸಿದ್ದಾರೆ.