ಸೈಫ್ ಆಲಿ ಖಾನ್ ಮೇಲಿ ದಾಳಿ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಅರೆಸ್ಟ್ ಆಗಿರುವ ಆರೋಪಿ ಅಸಲಿಯೇ ಅನ್ನೋ ಅನುಮಾನ ಮೂಡುತ್ತಿದೆ. ಇದರ ಬೆನ್ನಲ್ಲೇ ಪೊಲೀಸರ ಅವಾಂತರಕ್ಕೆ ಅಮಾಯಕ ಯುವಕ ನರಕ ಅನುಭವಿಸುವಂತಾಗಿದೆ. ಏನಿದು ಘಟನೆ?
ಮುಂಬೈ ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ನಡೆದ ದಾಳಿ ಪ್ರಕರಣ ದಿನದಿಂದ ದಿನಕ್ಕೆ ಅನುಮಾನಗಳನ್ನು ಹೆಚ್ಚಿಸುತ್ತಿದೆ. ದಾಳಿಯಿಂದ ಹಿಡಿದು ತನಿಖೆ, ಆರೋಪಿಯ ಅರೆಸ್ಟ್ ಎಲ್ಲವೂ ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ. ಪೊಲೀಸರು ಅರೆಸ್ಟ್ ಮಾಡಿದ ಆರೋಪಿ ಶರೀಫುಲ್ ಇಸ್ಲಾಮ್ ಮೇಲೂ ಅನುಮಾನಗಳು ಮೂಡಿದೆ. ಪೊಲೀಸರು ಅವಸರಕ್ಕೆ ಬಿದ್ದು ಅವಾಂತರ ಮಾಡಿದ್ದಾರಾ ಅನ್ನೋ ಅನುಮಾನಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೇ ಪ್ರಕರಣದಲ್ಲಿ ಮತ್ತೊಂದು ಅವಾಂತರ ಬಯಲಿಗೆ ಬಂದಿದೆ. ಸೈಫ್ ಮೇಲೆ ದಾಳಿ ನಡೆದ ಬೆನ್ನಲ್ಲೇ ಸಿಸಿಟಿವಿಯಲ್ಲಿ ಕಾಣಿಸಿಕೊಂಡ ವ್ಯಕ್ತಿಗೆ ಹೋಲುವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಈ ಯವಕನ ತಪ್ಪಾಗಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಪರಿಣಾಮ ಯುವಕ ಇದೀಗ ನರಕ ಯಾತನೆ ಅನುಭವಿಸುಂತವಾಗಿದೆ. ಈತ ಕೆಲಸ ಕಳೆದುಕೊಂಡಿದ್ದಾನೆ, ನಿಗಧಿಯಾಗಿದ್ದ ಮದುವೆ ಕೂಡ ರದ್ದಾದ ಘಟನೆ ನಡೆದಿದೆ.
ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಆತುರಕ್ಕೆ ಬಿದ್ದ ಪೊಲೀಸರು ಹಲವು ಎಡವಟ್ಟು ಮಾಡಿದ್ದಾರೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 31 ವರ್ಷದ ಆಕಾಶ್ ಕೈಲಾಶ್ ಕನೋಜಿಯಾ ಅನ್ನೋ ಯುವಕ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಸೈಫ್ ಮೇಲಿನ ದಾಳಿಯಾದ ಬಳಿಕ ಮುಂಬೈ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಎಲ್ಲಾ ರೈಲು ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹಲವು ಪೊಲೀಸ್ ಠಾಣೆಗಳಿಗೆ ಕಳುಹಿಸಿತ್ತು. ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ಚತ್ತಿಸೀಘಡ ಮೂಲದ ಅಕಾಶ್ ಕೈಲಾಶ್ ಕನೋಜಿಯಾ ತನ್ನ ಅಜ್ಜಿಯ ಆರೋಗ್ಯ ಹದಗೆಟ್ಟ ಕಾರಣ ಮುಂಬೈನಿಂದ ಚತ್ತೀಸಘಡದ ನೆಹ್ಲಾದಲ್ಲಿರುವ ಮನೆಗೆ ತೆರಳಿದ್ದರು. ಆದರೆ ಕೈಲಾಶ್ ಕನೋಜಿಯಾ, ಸಿಸಿಟಿವಿಯಲ್ಲಿ ಕಾಣಿಸಿಕೊಂಡ ಆರೋಪಿಗೆ ಹೋಲಿಕೆ ಇದೆ ಅನ್ನೋ ಕಾರಣಕ್ಕೆ ರೈಲ್ವ ಪೊಲೀಸರು ದುರ್ಗ್ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು.
ಜನವರಿ 18 ರಂದು ಕನೋಜಿಯಾನನ್ನು ಬಂಧಿಸಲಾಗಿತ್ತು. ಬಳಿಕ ರೈಲ್ವೇ ಪೊಲೀಸರು ಕನೋಜಿಯಾನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದರು. ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆದ ಎರಡನೇ ದಿನಕ್ಕೆ ಕನೋಜಿಯಾನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.. ದುರಂತ ಅಂದರೆ ಅನುಮಾನದ ಮೇಲೆ ಕನೋಜಿಯಾನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೀಗಿರುವಾಗ ಈತನ ಫೋಟೋ, ವಿಡಿಯೋಗಳು ಎಲ್ಲೂ ಹೊರಬರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೊಲೀಸರ ಮೇಲಿತ್ತು. ಆದರೆ ಈತನ ಫೋಟೋಗಳು ಸೋಶಿಯಲ್ ಮೀಡಿಯಾ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಇತ್ತ ಮುಂಬೈ ಪೊಲೀಸರ ವಿಚಾರಣೆ ವೇಳೆ ತಪ್ಪಾಗಿ ಈತನ ವಶಕ್ಕೆ ಪಡೆಯಲಾಗಿದೆ ಅನ್ನೋದು ಅರಿವಾಗಿತ್ತು. ಹೀಗಾಗಿ ಕನೋಜಿಯಾನನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಕನೋಜಿಯಾ ಬದುಕಿನ ತಾಳತಪ್ಪಿತ್ತು. ಕಾರಣ ಈತನ ಫೋಟೋಗಳು, ವಿಡಿಯೋಗಳು ಎಲ್ಲೆಡೆ ಹರಿದಾಡಿತ್ತು. ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ಆರೋಪಿ ಎಂದು ಎಲ್ಲೆಡೆ ಸುದ್ದಿ ಹರಿದಾಡಿತ್ತು. ಅಜ್ಜಿಯ ಆರೋಗ್ಯ ವಿಚಾರಿಸಿ, ಕೆಲವೇ ತಿಂಗಳಲ್ಲಿ ಮದುವೆಯಾಗಲಿರುವ ತನ್ನ ಹುಡುಗಿಯನ್ನು ಭೇಟಿಯಾಗಲು ಹೋದ ಕನೋಜಿಯಾ ಕೆಲ ದಿನ ಪೊಲೀಸರ ವಶಕ್ಕೆ ಕಳೆಯಬೇಕಾಯಿತು. ಅಷ್ಟರಲ್ಲಿ ಈತನ ಮುಂಬೈನಲ್ಲಿನ ಕೆಲಸ ಕಳದುಕೊಳ್ಳಬೇಕಾಯಿತು.
ಆರೋಪಿಗಳಿಗೆ ತಮ್ಮ ಕಂಪನಿಯಲ್ಲಿ ಕೆಲಸವಿಲ್ಲ ಎಂದು ಖಾಸಗಿ ಕಂಪನಿ ಕನೋಜಿಯಾನನ್ನು ಅಮಾನತು ಮಾಡಿತ್ತು. ಇತ್ತ ಫಿಕ್ಸ್ ಆಗಿದ್ದ ಮದುವೆ ಕೂಡ ರದ್ದಾಗಿದೆ. ಈ ಘಟನೆ ಬಳಿಕ ಹುಡುಗಿ ಕುಟುಂಬಸ್ಥರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಈತ ಭೇಟಿಯಾಗಿ ಪರಿಸ್ಥಿತಿ ವಿವರಿಸಲು ಪ್ರಯತ್ನಿಸಿದ್ದಾನೆ. ಆದರೆ ಹುಡುಗಿ ಕುಟುಂಬಸ್ಥರು ಭೇಟಿಗೂ ಅವಕಾಶ ನೀಡಿಲ್ಲ.