ಚಿತ್ರದುರ್ಗ: ಮಹಿಳೆ ಅಶಕ್ತಳೆಂಬ ಮನಸ್ಥಿತಿಯಿಂದ ಸಮಾಜ ಹೊರಬರಬೇಕಿದೆ. ವೈಜ್ಞಾನಿಕ ಜಗತ್ತಿನಲ್ಲಿ ಅತ್ಯಂತ ಸಾಧನೆ ಹಾದಿಯಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆಂಬ ವಾಸ್ತವ ಸತ್ಯ ಅರಿತುಕೊಳ್ಳಬೇಕೆಂದು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.
ಹೊಸದುರ್ಗದ ಕೆಲ್ಲೋಡು ಕನಕ ಮಠದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಚಿತ್ರದುರ್ಗ ತಾಲ್ಲೂಕು ಸಜ್ಜನಕೆರೆ ಗ್ರಾಮದ ಕುರುಬ ಸಮಾಜದ ಮಹಿಳೆಯರ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ದೇಶದ ಪ್ರಗತಿಯಲ್ಲಿ ರೈತರು, ಕಾರ್ಮಿಕರ ಬಳಿಕ ಹೆಚ್ಚು ಕೊಡುಗೆ ಮಹಿಳೆಯರದ್ದೇ ಆಗಿದೆ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಇದನ್ನು ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿ ಮಹಿಳೆಯರು ಉಳಿತಾಯದಲ್ಲಿ ಮುಂಚೂಣಿ ಯಲ್ಲಿರುತ್ತಾರೆ. ಜೊತೆಗೆ ಕಡಿಮೆ ಹಣದಲ್ಲಿ ಇಡೀ ಕುಟುಂಬ ನಿರ್ವಹಣೆ ಮೂಲಕ ನಿಜವಾದ ಆರ್ಥಿಕ ತಜ್ಞರಂತೆ ಬದುಕು ಕಟ್ಟಿಕೊಂಡಿರುತ್ತಾರೆ. ಹೆಣ್ಣಿನಲ್ಲಿನ ಹಣ ಉಳಿಸುವ ಬುದ್ಧಿವಂತಿಕೆ ಪುರುಷರು ಅಳವಡಿಸಿಕೊಂಡರೇ ನಾಡು ಸಮೃದ್ಧಿಯಾಗಲಿದೆ ಎಂದರು.
ಹೆಂಡ ಕುಡಿದು ದುಂದು ವೆಚ್ಚ ಮಾಡುವ ಪುರುಷರಿರುವ ಕುಟುಂಬದಲ್ಲಿ ಹೆಣ್ಣು ಕೂಲಿನಾಲಿ ಮಾಡಿ ಇಡೀ ಕುಟುಂಬವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾಳೆ. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ, ಮದುವೆ ಮಾಡಿ ಅವರ ಭವಿಷ್ಯ ಉಜ್ವಲಗೊಳಿಸುತ್ತಾಳೆ. ಇಂತಹ ಮಹಿಳಾ ವರ್ಗಕ್ಕೆ ಆರ್ಥಿಕ ಬಲ ನೀಡಿದರೆ ಇಡೀ ಕುಟುಂಬವನ್ನೇ ಆರ್ಥಿಕವಾಗಿ ಬಲಗೊಳಿಸುತ್ತಾಳೆ ಆರ್ಥಿಕ ಸೌಲಭ್ಯ ವ್ಯವಸ್ಥೆ ಕಡಿಮೆ ಇದೆ. ಅದರಲ್ಲೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಅನೇಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಅದನ್ನು ನೀಡಲು ಸಾಧ್ಯವಾಗದ ಮಹಿಳೆಯರು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡುತ್ತಾರೆ. ಮಕ್ಕಳ ಶಿಕ್ಷಣ, ಶುಭ ಕಾರ್ಯ ಸೇರಿ ವಿವಿಧ ಕಾರಣಕ್ಕೆ ಮಹಿಳೆಯರು ದುಬಾರಿ ಬಡ್ಡಿ ದರಕ್ಕೆ ಮೊರೆ ಹೋಗಿ ಸಾಲದ ಸುಳಿಗೆ ಸೀಲುಕುತ್ತಿದ್ದಾರೆ. ಇದರಿಂದ ಹೊರತರಬೇಕಾದ ಹೊಣೆಗಾರಿಕೆ ಧಾರ್ಮಿಕ ಸ್ಥಾನಗಳ ಮೇಲಿದೆ ಎಂದು ತಿಳಿಸಿದರು.
ಶಿಕ್ಷಣ, ಮನೆ ನಿರ್ಮಾಣ, ಕೃಷಿ ಚಟುವಟಿಕೆ, ಹೈನುಗಾರಿಕೆ ಹೀಗೆ ವಿವಿಧ ಕಾರ್ಯಗಳಿಗೆ ರಾಷ್ಟ್ರೀಕೃತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅವರ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ಬಹುದೊಡ್ಡ ಜವಾಬ್ದಾರಿ ಮಠ ಹಾಗೂ ಸಾಮಾಜಿಕ ಕಾಳಜಿ ಹೊಂದಿರುವ ವ್ಯವಸ್ಥೆ ಮೇಲಿದೆ ಎಂದ ಶ್ರೀಗಳು ಈ ಕಾರಣಕ್ಕೆ ಕಾಗಿನೆಲೆ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘವನ್ನು ಮಠದಿಂದ ಮಹಿಳೆಯರಿಗಾಗಿಯೇ ಸ್ಥಾಪಿಸಲಾಗಿದೆ. ಮಹಿಳೆಯರಿಗೆ ಮಾತ್ರ ಸಾಲ ಸೌಲಭ್ಯವನ್ನು ರಾಷ್ಟ್ರೀಕೃತ ಬ್ಯಾಂಕ್ ರೀತಿ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಗಂಡನ ಒತ್ತಡಕ್ಕೆ, ಆತನ ಖರ್ಚು-ವೆಚ್ಚಕ್ಕಾಗಿ, ಜಾತ್ರೆ, ಹಬ್ಬ ಹೀಗೆ ದುಂದುವೆಚ್ಚ ಮಾಡಲು ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ. ಮುಖ್ಯವಾಗಿ ಮಕ್ಕಳನ್ನು ಓದಿಸಲು ಸಾಲ ಮಾಡಿ. ಮದುವೆ ಕಾರ್ಯಗಳು ಕೂಡ ಸರಳವಾಗಿರಬೇಕು. ಅವರ ಭವಿಷ್ಯ ರೂಪಿಸುವ ರೀತಿ ಯೋಜನೆ ರೂಪಿಸಿ. ಪ್ರತಿಷ್ಠೆಗಾಗಿ ಆಡಂಬರದ ವಿವಾಹ ಕಾರ್ಯಗಳಿಂದ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿ ಕಾಗಿನೆಲೆ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘ ಕುರುಬ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಬಹುದೊಡ್ಡ ಕಾರ್ಯ ಆರಂಭಿಸಿದ್ದು, ಈ ಕೆಲಸಕ್ಕೆ ಸಜ್ಜನಕೆರೆ ಗ್ರಾಮದ ಮಹಿಳೆಯರು ಕೈಜೋಡಿಸಿರುವುದು ಇತರರಿಗೆ ಮಾದರಿ ಆಗಿದೆ ಎಂದು ಹೇಳಿದರು.
ಕುರುಬ ಸಂಘದ ಕಾರ್ಯದರ್ಶಿ ಜಿ.ರಾಜಪ್ಪ ಸಜ್ಜನಕೆರೆ ಮಾತನಾಡಿ, ಅನೇಕ ಸಂಘ-ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿ ನಾಯಿಕೊಡೆಗಳಂತೆ ತಲೆಎತ್ತಿದ್ದು, ಧೀರ್ಘಾವಧಿ ಸಾಲ ನೀಡಿ ದುಬಾರಿ ಬಡ್ಡಿ ವಸೂಲು ಮಾಡುತ್ತಿವೆ. ಅನಕ್ಷರಸ್ಥ ಮಹಿಳೆಯರು ಇದರ ಸುಳಿಗೆ ಸಿಲುಕಿ ಹೊರಬಾರದಂತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ವಾಸ್ತವತೆ ಅರಿತು ಸ್ವಾಮೀಜಿ ಅವರು ಮಹಿಳೆಯರ ಪ್ರಗತಿ ಜೊತೆಗೆ ಸಮಾಜದ ಅಭಿವೃದ್ಧಿಗಾಗಿ ಪಣತೊಟ್ಟು ಸಂಘ ಸ್ಥಾಪಿಸಿ, ಕಡಿಮೆ ದರದಲ್ಲಿ ಸಾಲ ವಿತರಣೆ ಯೋಜನೆ ರೂಪಿಸಿರುವುದು ಸಂತಸ ಉಂಟು ಮಾಡಿದೆ ಎಂದರು.
ಸಜ್ಜನಕೆರೆ ಗ್ರಾಮದ ಮುಖಂಡರಾದ ಮಂಜುಳಾ, ನಿಂಗಮ್ಮ, ಗೀತಾ, ಶಶಿಕಲಾ, ಅನಸೂಯಮ್ಮ, ಶಾಂತಮ್ಮ, ರಾಘಮ್ಮ, ಅಂಜಲಿ, ರೂಪಾ, ವಾಣಿ, ಪ್ರೇಮಾ, ಶಕುಂತಲಾ, ಜಯಲಕ್ಷ್ಮೀ, ಮೀನಾಕ್ಷಮ್ಮ, ಶಿವಮ್ಮ, ರೇಣುಕಾ, ಲಕ್ಷ್ಮೀದೇವಿ, ಗುರಸಿದ್ದಮ್ಮ ಇತರರಿದ್ದರು.

































