ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರ ಇದೇ ಮಾ.30ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ, ಹಲವು ವಿಚಾರಗಳ ಕುರಿತು ಸಲ್ಮಾನ್ ಹೇಳಿದ್ದಾರೆ. ‘ಸಿಕಂದರ್’ ಸಿನಿಮಾ ಸುತ್ತ ಯಾವುದೇ ವಿವಾದಗಳು ಬೇಡ ಎಂದು ಸಲ್ಮಾನ್ ಹೇಳಿದ್ದಾರೆ.
ಚಿತ್ರದ ಪ್ರಚಾರ ಕಾರ್ಯದಲ್ಲಿ ಸಲ್ಮಾನ್‌ಗೆ ನಿಮ್ಮ ಚಿತ್ರಗಳು ರಿಲೀಸ್ ಆದಾಗ ಒಂದಲ್ಲಾ ಒಂದು ವಿವಾದಗಳು ಟ್ರೆಂಡ್ ಆಗುತ್ತಲೇ ಇರುತ್ತದೆ ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ವಿವಾದಗಳ ಅಗತ್ಯವಿಲ್ಲ. ಆದರೆ ನಾನು ಹಲವಾರು ವಿವಾದಗಳನ್ನು ಎದುರಿಸಿದ್ದೇನೆ. ವಿವಾದಗಳಿಂದ ಸಿನಿಮಾ ಹಿಟ್ ಆಗುತ್ತೆ ಎಂಬ ನಿರೀಕ್ಷೆ ಇಲ್ಲ. ಇದರಿಂದ ಅದೆಷ್ಟೋ ಬಾರಿ ಸಿನಿಮಾ ರಿಲೀಸ್‌ಗೆ ತಡವಾಗೋದನ್ನು ನಾನು ನೋಡಿದ್ದೇನೆ ಎಂದರು. ಟ್ರೈಲರ್‌ನಲ್ಲಿ ನೋಡಿರೋದಕ್ಕಿಂತ ಹೆಚ್ಚಿನದ್ದು ಸಿನಿಮಾದಲ್ಲಿ ಪ್ರೇಕ್ಷಕರಿಗೆ ಸಿಗಲಿದೆ ಎಂದು ನಟ ಭರವಸೆ ನೀಡಿದ್ದಾರೆ.
ಭ್ರಷ್ಟ ರಾಜಕೀಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಸಲ್ಮಾನ್ ನಟಿಸಿದ್ದಾರೆ. ‘ಮಗಧೀರ’ ನಟಿ ಕಾಜಲ್, ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ, ಕನ್ನಡದ ನಟ ಕಿಶೋರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಮಾ.30ರಂದು ಸಿಕಂದರ್ ರಿಲೀಸ್ ಆಗಲಿದೆ. ಮೊದಲ ಬಾರಿ ಸಲ್ಮಾನ್ ಮತ್ತು ರಶ್ಮಿಕಾ ಮಂದಣ್ಣಜೊತೆಯಾಗಿ ನಟಿಸಿದ್ದಾರೆ.