ಕೊಲಂಬೊ : ನೆರೆಯ ದ್ವೀಪ ರಾಷ್ಟ್ರವಾದ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು ಹೆಚ್ಚಾಗಿದ್ದು, ಬೆಲೆ ಏರಿಕೆಯ ನಡುವೆಯೂ ಭಾರತವು 3,050 ಮೆಟ್ರಿಕ್ ಟನ್‌ಗಳಷ್ಟು ಉಪ್ಪು ಪೂರೈಕೆ ಮಾಡಲು ಮುಂದಾಗಿದೆ.
ಶ್ರೀಲಂಕಾ ಕರಾವಳಿಯಲ್ಲಿ ಸಂಗ್ರಹ ಮಾಡಲಾಗಿದ್ದ ಉಪ್ಪು ಭಾರೀ ಮಳೆಯಿಂದ ಕೊಚ್ಚಿಹೋಗಿದ್ದು, ಉಪ್ಪಿನ ಕೊರತೆ ಭಾರೀ ಹೆಚ್ಚಾಗಿದೆ. ಪರಿಣಾಮ ಉಪ್ಪಿನ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿ ಜನರಲ್ಲಿ ಆತಂಕ ಮೂಡಿದೆ. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ಭಾರತವು 3,050 ಮೆಟ್ರಿಕ್ ಟನ್ ಉಪ್ಪನ್ನು ಶ್ರೀಲಂಕಾ ದೇಶಕ್ಕೆ ರವಾನೆ ಮಾಡಿದೆ.
ಶ್ರೀಲಂಕಾದಲ್ಲಿ ಉಪ್ಪಿನ ತೀವ್ರ ಕೊರತೆಯಿಂದಾಗಿ ಕಳೆದ ಕೆಲ ದಿನಗಳಲ್ಲಿ ಅಡುಗೆ ಸಾಮಗ್ರಿಗಳ ಬೆಲೆಗಳು 3 ಪಟ್ಟು ಮತ್ತು 4 ಪಟ್ಟು ಹೆಚ್ಚಾಗಿದೆ. ಭಾರೀ ಮಳೆಯು ಸಮುದ್ರ ತೀರಗಳಲ್ಲಿ ಸಂಗ್ರಹವಾದ ಉಪ್ಪನ್ನು ಕೊಚ್ಚಿಹೋಗುವಂತೆ ಮಾಡಿದ್ದು, ತೀವ್ರ ಉಪ್ಪು ಬಿಕ್ಕಟ್ಟನ್ನು ಸೃಷ್ಟಿಸಿದೆ. ಉಪ್ಪಿನ ಕೊರತೆಯಿಂದಾಗಿ ಉಪ್ಪಿನ ಬೆಲೆ ಕೆ.ಜಿಗೆ 145 ರೂ.ಗಳಿಗೆ ಏರಿಯಾಗಿದೆ. ಜೊತೆಗೆ ಸಂಗ್ರಹಣೆದಾರರು ಮತ್ತು ಕಪ್ಪು ಮಾರುಕಟ್ಟೆದಾರರು ಉಪ್ಪು ಸರಬರಾಜುಗಳನ್ನು ಸಂಗ್ರಹಿಸುವ ಮೂಲಕ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಭಾರತವು ಶ್ರೀಲಂಕಾಕ್ಕೆ 3,050 ಮೆಟ್ರಿಕ್ ಟನ್ ಉಪ್ಪನ್ನು ಕಳುಹಿಸುವ ಮೂಲಕ ಸಹಾಯ ಮಾಡಿದೆ. ಒಟ್ಟು ಸಾಗಣೆಯಲ್ಲಿ, ಸರ್ಕಾರಿ ಸ್ವಾಮ್ಯದ ಉಪ್ಪು ಕಂಪನಿಗಳು 2,800 ಮೆಟ್ರಿಕ್ ಟನ್‌ಗಳನ್ನು ರವಾನಿಸಿವೆ. ಉಳಿದ 250 ಮೆಟ್ರಿಕ್ ಟನ್‌ಗಳನ್ನು ಖಾಸಗಿ ಸಂಸ್ಥೆಗಳಿಂದ ಖರೀದಿ ಮಾಡಲಾಗಿದೆ ಎನ್ನಲಾಗಿದೆ.