ಬೆಂಗಳೂರು : ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದಿ, ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನಾ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ನಟ ಅಜಯ್ ರಾವ್ ವಿರುದ್ಧ ಅವರ ಪತ್ನಿ ಸ್ವಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಅಜಯ್ ರಾವ್ ಹಾಗೂ ಸ್ವಪ್ನಾ ಅವರು ಪ್ರೀತಿಸಿ 2014 ರಲ್ಲಿ ಮದುವೆಯಾಗಿದ್ದರು. ಹೊಸೇಪಟೆಯಲ್ಲಿ ಆಪ್ತರು, ಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ಈ ಜೋಡಿ ಸಪ್ತಪದಿ ತುಳಿದಿದ್ದರು. ಈ ಜೋಡಿಗೆ ಚರಿಷ್ಮಾ ಹೆಸರಿನ ಮಗಳು ಕೂಡ ಇದ್ದಾಳೆ. ಇದೀಗ 11 ವರ್ಷದ ಬಳಿಕ ಈ ಜೋಡಿ ವಿಚ್ಛೇದನಕ್ಕೆ ಮುಂದಾಗಿದೆ.
ಅಜಯ್ ರಾವ್ ಅವರು 2003 ರಲ್ಲಿ ಬಿಡುಗಡೆ ಆದ ‘ಎಕ್ಸ್ಕ್ಯೂಸ್ ಮೀ’ ಸಿನಿಮಾ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅದಕ್ಕೂ ಮುನ್ನ ಸುದೀಪ್ ನಟನೆಯ ‘ಕಿಚ್ಚ’ ಸಿನಿಮಾನಲ್ಲಿ ಸುದೀಪ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು. ಬಳಿಕ ‘ತಾಜ್ ಮಹಲ್’, ‘ಪ್ರೇಮ್ ಕಹಾನಿ’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ-ಲೀಲಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.