ಕೋಲ್ಕತ್ತಾ : ಆರ್‌ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತ ಸಂಜಯ್ ರಾಯ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ತಮ್ಮ ಮಗ ತಪ್ಪಿತಸ್ಥನಾಗಿದ್ದರೆ ಗಲ್ಲಿಗೆ ಏರಿಸಿದರೂ ಬೇಸರವಿಲ್ಲ ಎಂದು ಸಂಜಯ್ ರಾಯ್ ತಾಯಿ ಮಾಲತಿ ರಾಯ್ ತಿಳಿಸಿದ್ದಾರೆ.
ಸೀಲ್ಡಾ ನ್ಯಾಯಾಲಯವು ಸಂಜಯ್ ರಾಯ್ ನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದ ವಿಚಾರವಾಗಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಂಟಿಯಾಗಿದ್ದಾಗ ಅಳುತ್ತೇನೆ. ಆದರೆ ಅವನ ಶಿಕ್ಷೆಯನ್ನು ವಿಧಿ ಎಂದು ಸ್ವೀಕರಿಸುತ್ತೇನೆ. ಮಹಿಳೆಯಾಗಿ ಮತ್ತು ಮೂರು ಹೆಣ್ಣು ಮಕ್ಕಳ ತಾಯಿಯಾಗಿ, ನನ್ನ ಮಗಳಂತಿರುವ ಮಹಿಳಾ ವೈದ್ಯೆಯ ತಾಯಿಯ ಯಾತನೆ ಮತ್ತು ನೋವನ್ನು ನಾನು ಅನುಭವಿಸಬಲ್ಲೆ. ಅವನ ಅಪರಾಧವು ಕಾನೂನಿನ ದೃಷ್ಟಿಯಲ್ಲಿ ಸಾಬೀತಾಗಿರುವುದರಿಂದ ನನಗೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ಸಹೋದರಿ, ಅವನು ತಪ್ಪಿತಸ್ಥನೆಂದು ಸಾಬೀತಾದರೆ, ಕಾನೂನು ಅವನಿಗೆ ಶಿಕ್ಷೆ ನೀಡಲಿ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಬಂಧಿತ ಸಂಜಯ್ ರಾಯ್‌ನನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ಅತ್ಯಾಚಾರ, ಕೊಲೆ ಸೆಕ್ಷನ್ ಗಳಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ್ದು ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಲಿದೆ.