ಚಿತ್ರದುರ್ಗ : ಶ್ರೀನಗರ ಕಿಟ್ಟಿ, ರಚಿತಾ ರಾಮು ನಟಿಸಿರುವ ಸಂಜು ವೆಡ್ಸ್ ಗೀತಾ ಭಾಗ-2 ಚಿತ್ರದ ಆಡಿಯೋ ರಿಲೀಸ್ ಗುರುವಾರ ಬಿಗ್ಬಾಸ್ ಹೋಟೆಲ್ನಲ್ಲಿ ಬಿಡುಗಡೆಯಾಯಿತು.
ಆಡಿಯೋ ರಿಲೀಸ್ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್ ಬಡ ಕುಟುಂಬದ ಹುಡುಗನಿಗೆ ಶ್ರೀಮಂತ ಹುಡುಗಿಯ ಜೊತೆ ಪ್ರೇಮಾಂಕುರವಾಗಿರುವ ಈ ಚಿತ್ರದುರ್ಗದಲ್ಲಿ ನಟ-ನಟಿಯರು ಅಮೋಘವಾಗಿ ಅಭಿನಯಿಸಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರವಾಗಿದ್ದು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಚಿತ್ರ ಯಶಸ್ವಿಯಾಗಲು ಸಹಕರಿಸುವಂತೆ ಮನವಿ ಮಾಡಿದರು.
ನಟ ಶ್ರೀನಗರ ಕಿಟ್ಟಿ ಮಾತನಾಡಿ ಜ.10 ರಂದು ಚಿತ್ರ ತೆರೆ ಕಾಣಲಿದ್ದು, ಶಿಡ್ಲಘಟ್ಟ, ಬೆಂಗಳೂರು, ಮೈಸೂರು, ಜರ್ಮನ್, ಇಟಾಲಿಯಲ್ಲಿ ಚಿತ್ರೀಕರಣವಾಗಿದೆ. ರೇಷ್ಮೆ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಮೇಲೆ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಕನ್ನಡಿಗರ ಆರೈಕೆ ನಮ್ಮ ಚಿತ್ರದ ಮೇಲಿರಲಿ. ಎಂದು ಕೋರಿದ ಅವರು ಇದೊಂದು ಅತ್ಯುತ್ತಮವಾದ ಪ್ರೇಮಕಥೆ ಎಂದು ಹೇಳಿದರು.
ಚಿತ್ರ ನಿರ್ಮಾಪಕ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಸಂಜು ವೆಡ್ಸ್ ಗೀತಾ ಭಾಗ-2 ಸಿನಿಮಾರಂಗದಲ್ಲಿಯೇ ಅದ್ಬುತವಾದ ಸದ್ದು ಮಾಡಿದೆ. ಚಿತ್ರದಲ್ಲಿ ಅದ್ಬುತವಾದ ಫೋಟೋಗ್ರಫಿಯಿದೆ. ಚಿತ್ರ ಯಶಸ್ಸು ಸಾಧಿಸಿ ಲಾಭ ತಂದು ಕೊಡಲಿ ಎಂದು ಹಾರೈಸಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಮಾತನಾಡುತ್ತ ಈ ಚಿತ್ರ ನೂರು ದಿನ ಪೂರೈಸಲಿ. ಕನ್ನಡ ಚಿತ್ರಕ್ಕೆ ನಾಡಿನಲ್ಲಿ ಮೊದಲ ಆದ್ಯತೆ ಇರಲಿ. ಚಿತ್ರರಸಿಕರು ಇಂತಹ ಚಿತ್ರಗಳನ್ನು ನೋಡಿ ನಿರ್ಮಾಪಕರು, ನಿರ್ದೇಶಕರು ಹಾಗೂ ನಟ-ನಟಿಯರನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ಭಾರ್ಗವಿ ದ್ರಾವಿಡ್ ಮಾತನಾಡಿ ಸಂಜು ವೆಡ್ಸ್ ಗೀತಾ ಭಾಗ-2 ವಿಭಿನ್ನವಾದ ಸ್ಥಳಗಳಲ್ಲಿ ಚಿತ್ರೀಕರಣವಾಗಿದೆ. ಕನ್ನಡ ಚಿತ್ರರಂಗವನ್ನು ಬೆಳೆಸಬೇಕಾಗಿರುವುದರಿಂದ ಪ್ರತಿಯೊಬ್ಬರು ಈ ಚಿತ್ರ ವೀಕ್ಷಿಸಿ ಎಂದು ಕೋರಿದರು.