ಬೆಂಗಳೂರು: ತನ್ನ ಲಿವ್ ಇನ್ ಸಂಗಾತಿಯನ್ನು ಕೊಂದ ಶಂಶುದ್ದೀನ್ ಬಳಿಕ ಶವವನ್ನು ಬಿಬಿಎಂಪಿ ಕಸದ ಲಾರಿಗೆ ಹಾಕುವ ಮುನ್ನ ಸ್ಕೂಟರ್‌ನಲ್ಲಿಟ್ಟುಕೊಂಡು ಮೂರು ಗಂಟೆ ಕಾಲ ನಗರದ ವಿವಿಧೆಡೆ ಸುತ್ತಾಡಿದ್ದ ವಿಚಾರ ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ.
ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸಿರುವ ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು, ಮಹಿಳೆಯನ್ನು ಕೊಲೆಗೈದಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶಂಶುದ್ದೀನ್ (32) ಬಂಧಿತ ಆರೋಪಿ.
ಜೂ.28ರಂದು ರಾತ್ರಿ ತನ್ನ ಜತೆ ಸಹಜೀವನ ನಡೆಸುತ್ತಿದ್ದ ಆಶಾ ಅಲಿಯಾಸ್ ಪುಷ್ಪಾ (33) ಅವರನ್ನು ಕೊಲೆಗೈದಿದ್ದ. ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಸಿ.ಕೆ. ಅಚ್ಚುಕಟ್ಟು ಸ್ಕೆಟಿಂಗ್ ಮೈದಾನ ಬಳಿ ನಿಲ್ಲಿಸಿದ್ದ ಬಿಬಿಎಂಪಿ ಕಸದ ಲಾರಿಗೆ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನೊಟ್ಟಿಗೆ ಕಳೆದ ಆರು ತಿಂಗಳಿಂದ ಸಹಜೀವನ ನಡೆಸುತ್ತಿದ್ದ ಆಶಾ, ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದಳು. ಮತ್ತೊಬ್ಬ ವ್ಯಕ್ತಿ ಜತೆ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಬೇಸತ್ತು ಕೊಲೆ ಮಾಡಿದೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಶಂಶುದ್ದೀನ್ ತಪ್ರೊಪ್ಪಿಕೊಂಡಿದ್ದಾನೆ.
ಆರೋಪಿಯನ್ನು ನಾಲ್ಕು ದಿನ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಕೆಟಿಂಗ್ ಮೈದಾನದ ಸಮೀಪ ನಿಲ್ಲಿಸಿದ್ದ ಕಸದ ಲಾರಿಯಲ್ಲಿ ದೊಡ್ಡ ಪ್ಲಾಸ್ಟಿಕ್ ಚೀಲ ಗಮನಿಸಿದ್ದ ಸ್ಥಳೀಯರೊಬ್ಬರು, ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಅನುಮಾನದ ಮೇರೆಗೆ ಚೀಲ ಬಿಚ್ಚಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಕೊಲೆಯಾದ ಮಹಿಳೆ ಯಾರು ಎಂಬುದು ಗೊತ್ತಾಗಿರಲಿಲ್ಲ. ಗುರುತು ಪತ್ತೆಗೆ ತನಿಖೆ ನಡೆಸಿದ ಬಳಿಕ ಮೃತ ಮಹಿಳೆ ಧರಿಸಿದ್ದ ಟೀ ಶರ್ಟ್‌ನಲ್ಲಿ ಏಜೆನ್ಸಿಯೊಂದರ ಹೆಸರಿತ್ತು. ಈ ಸುಳಿವು ಆಧರಿಸಿ ಹೆಚ್ಚಿನ ಮಾಹಿತಿ ಶೋಧಿಸಿದಾಗ ಮೃತ ಮಹಿಳೆ ಕೊತ್ತನೂರು ದಿಣ್ಣೆಯ ಆಶಾ ಎಂಬುದು ದೃಢಪಟ್ಟಿತು.
ಹುಳಿಮಾವು ಸಮೀಪದ ಖಾಸಗಿ ಕಂಪನಿಯಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಆಶಾ, ಶಂಶುದ್ದೀನ್ ಜತೆ ಸಹಜೀವನ ನಡೆಸುತ್ತಿರುವ ಮಾಹಿತಿ ಸಿಕ್ಕಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲೆಯಾದ ಮಹಿಳೆ ಆಶಾ ಎಂಬುದು ದೃಢಪಡುತ್ತಿದ್ದಂತೆ ಶಂಶುದ್ದೀನ್ ಮೇಲೆ ಅನುಮಾನ ಶುರುವಾಗಿತ್ತು. ಜತೆಗೆ, ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶಗಳಲ್ಲಿನ ಸಿಸಿಟಿವಿ ಪರಿಶೀಲಿಸಿದ ಬಳಿಕ ದ್ವಿಚಕ್ರವಾಹನದಲ್ಲಿ ಚೀಲ ತಂದು ಕಸದ ಲಾರಿಗೆ ಎಸೆದು ಹೋಗುತ್ತಿರುವ ದೃಶ್ಯ ಸಿಕ್ಕಿತ್ತು.
ಇದರ ಜಾಡು ಹಿಡಿದು ಸಿ.ಕೆ. ಅಚ್ಚುಕಟ್ಟು, ಜಯನಗರ ಸೇರಿದಂತೆ ಪ್ರಮುಖ ಸಿಗ್ನಲ್‌ಗಳಲ್ಲಿನ 100ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿ ದ್ವಿಚಕ್ರ ವಾಹನ ಸಾಗಿರುವ ಮಾರ್ಗ ಭೇದಿಸಿ ಶಂಶುದ್ದೀನ್ ಕೆಲಸ ಮಾಡುತ್ತಿದ್ದ ಕಚೇರಿಯನ್ನು ಪತ್ತೆಹಚ್ಚಲಾಗಿತ್ತು.
ಇದರ ಜಾಡು ಹಿಡಿದು ಸಿ.ಕೆ. ಅಚ್ಚುಕಟ್ಟು, ಜಯನಗರ ಸೇರಿದಂತೆ ಪ್ರಮುಖ ಸಿಗ್ನಲ್‌ಗಳಲ್ಲಿನ 100ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿ ದ್ವಿಚಕ್ರ ವಾಹನ ಸಾಗಿರುವ ಮಾರ್ಗ ಭೇದಿಸಿ ಶಂಶುದ್ದೀನ್ ಕೆಲಸ ಮಾಡುತ್ತಿದ್ದ ಕಚೇರಿಯನ್ನು ಪತ್ತೆಹಚ್ಚಲಾಗಿತ್ತು.
ಬಳಿಕ ಆತ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಬಂಧಿಸಿ ವಿಚಾರಣೆ ನಡೆಸಿದಾಗ ಆಶಾ ಅವರನ್ನು ಕೊಂದು ಮೃತದೇಹ ಎಸೆದಿದ್ದ ಸತ್ಯ ಬಾಯ್ದಿಟ್ಟಿದ್ದ ಎಂದು ಅಧಿಕಾರಿ ಹೇಳಿದರು.
ಕೊತ್ತನೂರು ದಿಣ್ಣೆ ನಿವಾಸಿ ಆಶಾ ಅವರ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.
ವಿಧವೆಯಾದ ಆಶಾ, ಹುಳಿಮಾವಿನ ಖಾಸಗಿ ಕಂಪನಿಯಲ್ಲಿ ಏಜೆನ್ಸಿ ಮುಖಾಂತರ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಹೌಸ್‌ಕೀಪರ್ ಆಗಿದ್ದ ಶಂಶುದ್ದೀನ್ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಟ್ಟಿಗೆ ಮೀನಾಕ್ಷಿ ಮಾಲ್ ಹಿಂಭಾಗದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆರು ತಿಂಗಳಿಂದ ವಾಸಿಸುತ್ತಿದ್ದರು