ಯುವತಿಯೊಬ್ಬಳು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ ವಿಡಿಯೋ ಕಾಲ್ನಲ್ಲಿ ಬಟ್ಟೆ ಬಿಚ್ಚಿದ್ದು ಮಾತ್ರವಲ್ಲ, 5 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡ ಘಟನೆ ಗುಜರಾತ್ನ ಅಹಮ್ಮದಾಬಾದ್ನಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ :
ಅಕ್ಟೋಬರ್ 13ರಂದು ಕೊರಿಯರ್ ಕಂಪನಿಯ ಹೆಸರಿನಲ್ಲಿ ಕರೆಯೊಂದು ಬಂದಿದೆ. ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್ಗೆ ಕೊರಿಯರ್ ಹೋಗಿದೆ. ಈ ಕೊರಿಯರ್ ಪಾರ್ಸೆಲ್ನಲ್ಲಿ 3 ಲ್ಯಾಪ್ಟಾಪ್, 2 ಫೋನ್, 150 ಗ್ರಾಂ ಡ್ರಗ್ಸ್, 1.5 ಕೆಜಿ ಬಟ್ಟೆ ಕಳುಹಿಸಲಾಗಿದೆ.
ಇದು ಡ್ರಗ್ಸ್ ವ್ಯವಹಾರ ದಂಧೆ ಮಾಡುತ್ತಿರುವವರ ಕೆಲಸವಾಗಿದೆ. ನೀವು ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ಕರೆ ಮಾಡಿ ದೂರು ನೀಡಿ ಎಂದು ಸೂಚಿಸಿದ್ದಾರೆ. ಅಲ್ಲದೇ ವ್ಯಾಟ್ಸ್ಆಯಪ್ ಕರೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಆಬಳಿಕ ಸೈಬರ್ ಕ್ರೈಂಗೆ ಕರೆ ಮಾಡಲು ನಂಬರ್ ಕೂಡ ಕಳುಹಿಸಲಾಗಿದೆ. ಆತಂಕದಲ್ಲಿದ್ದ ಯುವತಿ, ತನಗೆ ಸಿಕ್ಕ ಸೈಬರ್ ಕ್ರೈಂ ನಂಬರ್ಗೆ ಕರೆ ಮಾಡಿದ್ದಾಳೆ. ಕರೆ ಸ್ವೀಕರಿಸಿದ ವ್ಯಕ್ತಿ ದೆಹಲಿ ಸೈಬರ್ ಕ್ರೈಂ ಅಧಿಕಾರಿ ಎಂದು ಹೇಳಿ ವಿಚಾರಣೆ ಆರಂಭಿಸಿದ್ದಾನೆ. ಈ ವೇಳೆ ಯುವತಿ ಕೊರಿಯರ್ ಬಾಯ್ ಕರೆ ಮಾಡಿ ತನ್ನ ಹೆಸರಿನಲ್ಲಿ ಕೊರಿಯರ್ ಹೋಗಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾಳೆ. ಇದಕ್ಕೆ ಇದು ನರ್ಕೋಟಿಕ್ಸ್ ಪೊಲೀಸರ ಅಡಿಯಲ್ಲಿ ಬರಲಿದೆ. ಹೀಗಾಗಿ ಸಿಬಿಐ ಪೊಲೀಸರು ವಿಡಿಯೋ ಕಾಲ್ ಮೂಲಕ ಮಾಹಿತಿ ಪಡೆಯುತ್ತಾರೆ. ವಿಡಿಯೋ ಕಾಲ್ ರಿಸೀವ್ ಮಾಡಿ ಎಂದಿದ್ದಾರೆ. ಕೆಲವೇ ಕ್ಷಣದಲ್ಲಿ ಯುವತಿಗೆ ಸಿಬಿಐ ಅಧಿಕಾರಿ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಲಾಗಿದೆ. ಅಧಿಕಾರಿ ಮುಖಕ್ಕೆ ಮಾಸ್ಕ್ ಧರಿಸಿ ವಿಡಿಯೋ ಕಾಲ್ನಲ್ಲಿ ಪ್ರತ್ಯಕ್ಷವಾಗಿದ್ದಾನೆ. ಬಳಿಕ ಬರ್ತ್ ಸರ್ಟಿಫಿಕೇಟ್ನಲ್ಲಿ ದೇಹದಲ್ಲಿನ ಮಚ್ಚೆ ಹಾಗೂ ಇತರ ಗುರುತು ಪತ್ತೆ ಹಚ್ಚಲು ಬಟ್ಟೆ ಬಿಚ್ಚಲು ಸೂಚಿಸಿದ್ದಾರೆ. ಇದಕ್ಕೆ ಯುವತಿ ನಿರಾಕರಿಸಿದಾಗ ಕೇಸು, ಜೈಲು ಎಂದು ಬೆದರಿಸಿದ್ದಾರೆ. ಇದೇ ವೇಳೆ ನಕಲಿ ಸಿಬಿಐ ಅಧಿಕಾರಿ ಕರೆಯಲ್ಲಿ ಮಹಿಳಾ ಅಧಿಕಾರಿ ಪ್ರತ್ಯಕ್ಷಗೊಂಡಿದ್ದಾರೆ. ಬೇರೆ ದಾರಿ ಕಾಣದೆ ಯುವತಿ ಬಟ್ಟೆ ಬಿಚ್ಚಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಗಮನಿಸಿದರೆ ಡ್ರಗ್ಸ್ ದಂಧೆಯಲ್ಲಿ ನಿಮ್ಮ ಪಾತ್ರವಿರುವುದು ಖಚಿತವಾಗಿದೆ. ಇದು ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಯಾಗಿ ಕೇಸ್ ದಾಖಲಾಗಲಿದೆ. ಹೀಗಾಗಿ ಪ್ರಬಲ ಕೇಸ್ ಆಗಲಿದೆ ಎಂದು ಬೆದರಿಸಿದ್ದಾರೆ. ಆದರೆ ನಾವು ನಿಮಗೆ ಸಹಾಯ ಮಾಡ್ತೀವಿ ಅಂತ ಹೇಳಿ ಒಂದಷ್ಟು ಚಾರ್ಜಿಂಗ್ ಹೆಸರಿನಲ್ಲಿ ಒಟ್ಟು 4.92 ಲಕ್ಷ ರೂಪಾಯಿ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಹಣ ವರ್ಗಾವಣೆ ಮಾಡಿದ ಬಳಿಕ ಕರೆ ಮಾಡಿದ ಯಾವುದೇ ನಂಬರ್ ಚಾಲ್ತಿಯಲ್ಲಿಲ್ಲ. ತಾನು ಮೋಸ ಹೋಗಿರುವುದಾಗಿ ಯುವತಿಗೆ ಅರಿವಾಗಿದೆ. ಸದ್ಯ ನರನ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.