ಚಿತ್ರದುರ್ಗ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆಗಾಗಿ ಜಿಲ್ಲೆಯಲ್ಲಿ ನಡೆದಿರುವ ಸಮೀಕ್ಷೆ ಕಾರ್ಯದ ಅವಧಿಯನ್ನು ಇದೇ ಮೇ. 28 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಕಾರ್ಯ ಕಳೆದ ಮೇ. 05 ರಿಂದ ಆರಂಭಗೊಂಡಿದ್ದು, ಸರ್ಕಾರದ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೇ.16ರಂದು ಜರುಗಿದ ವಿಡಿಯೋ ಸಂವಾದ ಸಭೆಯಲ್ಲಿ ಸೂಚನೆ ನೀಡಿರುವಂತೆ, ಇದೀಗ ಸಮೀಕ್ಷಾ ಕಾರ್ಯವನ್ನು ಮೇ. 28 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಒಟ್ಟಾರೆ ಸಮೀಕ್ಷಾ ಕಾರ್ಯ ಮೇ. 23 ರವರೆಗೆ ನಡೆಸಬೇಕಾಗಿತ್ತು. ಇದೀಗ ಮೇ. 28 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಪರಿಷ್ಕøತ ವೇಳಾಪಟ್ಟಿಯಂತೆ ಮೊದಲನೆ ಹಂತದಲ್ಲಿ ಮನೆ ಮನೆ ಭೇಟಿ ನೀಡಿ ಕೈಗೊಳ್ಳುವ ಸಮೀಕ್ಷಾ ಕಾರ್ಯವು ಮೇ. 25 ರವರೆಗೆ ಜರುಗಲಿದೆ. ಎರಡನೆ ಹಂತದಲ್ಲಿ, ಸಮೀಕ್ಷೆ ಬ್ಲಾಕ್‍ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು, ಮನೆ-ಮನೆ ಭೇಟಿ ಅವಧಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮೇ. 28 ರವರೆಗೆ ಜರುಗಲಿದ್ದು, ಮೂರನೆ ಹಂತದಲ್ಲಿ ಸ್ವಯಂ ಘೋಷಣೆ ಮಾಡಿ, ಆನ್‍ಲೈನ್ ಮೂಲಕ ಸಮೀಕ್ಷೆ ಕಾರ್ಯವು ಮೇ. 28 ರವರೆಗೆ ಜರುಗಲಿದೆ.
ಪರಿಷ್ಕøತ ವೇಳಾಪಟ್ಟಿಯನ್ವಯ ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಕುಟುಂಬದ ಸಂಪೂರ್ಣ ಮಾಹಿತಿ ನೀಡಿ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.