ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ಮೊಂಥಾ ಚಂಡಮಾರುತದ ಅಬ್ಬರ ತೀವ್ರಗೊಂಡಿದೆ. ಭಾರಿ ಗಾಳಿಯೊಂದಿಗೆ ಮೊಂಥಾ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಯತ್ತ ಧಾವಿಸಿ ಬರುತ್ತಿದೆ. ಆಂಧ್ರ, ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೂ ಚಂಡಮಾರುತ ಪರಿಣಾಮ ಬೀರಲಿದ್ದು, ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ.
ನಾಳೆ ಸಂಜೆ ಅಥವಾ ರಾತ್ರಿ ವೇಳೆಗೆ ಮೊಂಥಾ ಚಂಡಮಾರುತ ಆಂಧ್ರದ ಮಚಲಿಪಟ್ಟಣ, ಕಳಿಂಗ ಪಟ್ಟಣ ನಡುವಿನ ಕಾಕಿನಾಡ ಬಳಿ ಸಮುದ್ರ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. 90ರಿಂದ 100 ಕೀ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮುಂಜಾಗೃತಾ ಕ್ರಮವಾಗಿ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಮೊಂಥಾ ಚಂಡಮಾರುತದ ಪರಿಣಾಮ ಎರಡು ದಿನಗಳ ಕಾಲ ಬಿರುಗಾಳಿ ಹಾಗೂ ಮಳೆಯ ಅಬ್ಬರ ಜೋರಾಗಲಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಕಾಕಿನಾಡ ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಇಂದಿನಿಂದ 5 ದಿನಗಳ ಕಾಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
































