ಚಿತ್ರದುರ್ಗ : ಎಸ್ಸಿಪಿ. ಟಿಎಸ್ಪಿ. ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಾದ ನಾಗವೇಣಿರವರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷಷ್ಟ ವರ್ಗದ ಏಳಿಗೆಗಾಗಿ ಬಳಸಬೇಕಾಗಿರುವ ಹಣವನ್ನು ಬೇರೆ ಉದ್ದೇಶಗಳಿಗೆ ಖರ್ಚು ಮಾಡುವಂತಿಲ್ಲ. ಆದರೂ ರಾಜ್ಯ ಸರ್ಕಾರ ಎಸ್ಸಿ.ಎಸ್ಟಿ.ಗಳ ಅಭಿವೃದ್ದಿಗಾಗಿ ಬಳಸಬೇಕಾಗಿರುವ ಹಣವನ್ನು ಬೇರೆ ಕೆಲಸಗಳಿಗೆ ವಿನಿಯೋಗಿಸುತ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರನ್ನು ವಂಚಿಸಿಕೊಂಡು ಬರುತ್ತಿದೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯನವರು ಘೋಷಿಸಿದ ಐದು ಉಚಿತ ಗ್ಯಾರೆಂಟಿಗಳಿಗೆ ಎಸ್ಸಿ.ಪಿ. ಟಿ.ಎಸ್ಪಿ. ಹಣವನ್ನು ಖರ್ಚು ಮಾಡುತ್ತ ದಲಿತರನ್ನು ಕಡೆಗಣಿಸುತ್ತಿದ್ದಾರೆ. 38 ಇಲಾಖೆಗಳಲ್ಲಿ ಖಾಲಿಯಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಬೇಕು. ಎಸ್ಸಿಪಿ. ಟಿಎಸ್ಪಿ. ಹಣವನ್ನು ಬಳಸುತ್ತಿರುವ ಅಧಿಕಾರಿಗಳ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸುಪ್ರಿಂಕೋರ್ಟ್ ನಿರ್ದೇಶನದಂತೆ ದತ್ತಾಂಶ ಪಡೆದ ತಕ್ಷಣವೇ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಜನಸಂಖ್ಯೆಗನುಗುಣವಾಗಿ ಬ್ಯಾಕ್ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಘಟಕದ ಸಂಚಾಲಕ ಕೊಂಡಾಪುರ ಪರಮೇಶ್ವರಪ್ಪ, ಹೊನ್ನೂರು ಮಾರಣ್ಣ, ಹಿರೇಹಳ್ಳಿ ರಾಜಣ್ಣ
ಆನಂದ, ದಡಗೂರು ಗಂಗಾಧರ, ಹೆಚ್.ಉಮೇಶ, ಎಸ್.ಆನಂದ ಗೌರಸಮುದ್ರ, ಎಸ್.ಮಹಾಂತೇಶ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.