ಬೆಂಗಳೂರು : ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿದ್ರೆ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಕೆಲವರು ಸಂಚಾರಿ ನಿಯಮ ಉಲ್ಲಂಘನೆ ಮರೆಮಾಚಲು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಕೆಲ ಪುಂಡರು ವಾಹನಗಳಿಗೆ ನಂಬರ್ ಪ್ಲೇಟ್ ಹಾಕದೆ, ನಂಬರ್ ಪ್ಲೇಟ್ ವಿಕಾರಗೊಳಿಸಿ ಓಡಾಡುತ್ತಿದ್ದಾರೆ. ಅಂತವರನ್ನು ಮಟ್ಟ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಪಶ್ಚಿಮ ವಿಭಾಗ ಒಂದರಲ್ಲೇ 40ಕ್ಕೂ ಹೆಚ್ಚು ವಾಹನ ಸವಾರರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ನಗರದ ವಿವಿಧ ವಿಭಾಗದಲ್ಲಿ ಒಟ್ಟು ನೂರಕ್ಕು ಅಧಿಕ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಬಿಸಿಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ರಾತ್ರಿಯಲ್ಲಿ ನಗರದಾದ್ಯಂತ ಸುಮಾರು 1,000 ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದರು. ಕೆಲವರು ಸರಿಯಾದ ಕಾರಣ ನೀಡಿ ವಾಹನ ಬಿಡಿಸಿಕೊಂಡು ಹೋದರೆ, ಉಳಿದವರು ಸರಿಯಾದ ಕಾರಣ ನೀಡದಿರುವ ಹಿನ್ನೆಲೆ ಅಂತವರ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾದವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗುತ್ತದೆ. ವಾಹನ ಸವಾರರು ಕೋರ್ಟ್ ಮುಖಾಂತರವೇ ತಮ್ಮ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳುವಂತೆ ಪೊಲೀಸರು ಮಾಡುತ್ತಿದ್ದಾರೆ.