ರಾಯ್ಪುರ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ 14 ನಕ್ಸಲರನ್ನು ಎನ್‌ಕೌಂಟರ್ ಮಾಡಿವೆ.
ಎರಡು ಪ್ರತ್ಯೇಕ ಕಡೆಗಳಲ್ಲಿ ಎನ್‌ಕೌಂಟರ್ ನಡೆಸಲಾಗಿದೆ. ಉಗ್ರರ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ನಂತರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಬಸ್ತಾರ್ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಕ್ಮಾ ಜಿಲ್ಲೆಯ ದಕ್ಷಿಣ ಪ್ರದೇಶದ ಕಾಡಿನಲ್ಲಿ ಶೋಧ ನಡೆಸುತ್ತಿದ್ದಾಗ, ನಕ್ಸಲರು ಡಿಆರ್‌ಜಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದರು. ಪ್ರತ್ಯುತ್ತರವಾಗಿ ಭದ್ರತಾ ಪಡೆಗಳು 12 ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಸುಕ್ಮಾ ಜಿಲ್ಲೆಯ ಕಿಸ್ತಾರಾಮ್ ಪ್ರದೇಶದ ಅರಣ್ಯದಲ್ಲಿ ಡಿಆರ್‌ಜಿ ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಸಾವನ್ನಪ್ಪಿದ್ದಾರೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಿರಣ್ ಚವಾಣ್ ಹೇಳಿದ್ದಾರೆ.
ಅದೇ ರೀತಿ, ಪಕ್ಕದ ಬಿಜಾಪುರ ಜಿಲ್ಲೆಯಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಡಿಆರ್‌ಜಿ ಮತ್ತು ಛತ್ತೀಸ್‌ಗಢ ಪೊಲೀಸರ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದರಲ್ಲಿ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ. ಬಿಜಾಪುರ ಜಿಲ್ಲೆಯ ಅರಣ್ಯ ಪ್ರದೇಶದಿಂದ ಭದ್ರತಾ ಪಡೆಗಳು ಒಂದು ಸೆಲ್ಫ್-ರೀಲೋಡಿಂಗ್ ರೈಫಲ್ (ಎಸ್‌ಎಲ್‌ಆರ್) ಮತ್ತು 12 ಬೋರ್ ರೈಫಲ್‌ಗಳು ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.
































