ನವದೆಹಲಿ : ದೆಹಲಿಯಲ್ಲಿರುವ ಸಂಸತ್ ಭವನದಲ್ಲಿ ಮತ್ತೊಮ್ಮೆ ಭದ್ರತಾ ಉಲ್ಲಂಘನೆಯಾಗಿದೆ. ಶುಕ್ರವಾರ ಬೆಳಗ್ಗೆ ವ್ಯಕ್ತಿಯೊಬ್ಬ ಮರವನ್ನು ಹತ್ತಿ ಗೋಡೆ ಏರುವ ಮೂಲಕ ಸಂಸತ್ತಿನ ಭವನದ ಆವರಣವನ್ನು ಪ್ರವೇಶ ಮಾಡಿದ್ದಾನೆ.
ಶುಕ್ರವಾರ ಬೆಳಿಗ್ಗೆ 6:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ರೈಲ್ ಭವನದ ಕಡೆಯಿಂದ ಗೋಡೆ ಮೇಲೆ ಹಾರಿದ್ದ ವ್ಯಕ್ತಿ ಹೊಸ ಸಂಸತ್ತಿನ ಕಟ್ಟಡದ ಗರುಡ ಗೇಟ್ ಅನ್ನು ತಲುಪಿದ್ದ. ಬಳಿಕ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಆತನನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಗುರುವಾರ ಮುಕ್ತಾಯವಾಗಿತ್ತು. ಅಧಿವೇಶನ ಮುಕ್ತಾಯವಾದ ಒಂದು ದಿನದ ನಂತರ ಭದ್ರತಾ ಉಲ್ಲಂಘನೆಯಾಗಿದೆ. ಆಗಾಗ್ಗೆ ಅಡ್ಡಿಪಡಿಸುವಿಕೆಗಳೊಂದಿಗೆ ಮುಕ್ತಾಯಗೊಂಡ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ.
ಇನ್ನು ಕಳೆದ ವರ್ಷ 20 ವರ್ಷದ ಯುವಕನೊಬ್ಬ ಸಂಸತ್ತಿನ ಗೋಡೆಯನ್ನು ಹತ್ತಿ ಅನೆಕ್ಸ್ ಕಟ್ಟಡದ ಆವರಣದೊಳಗೆ ಹಾರಿದ್ದ. ಜೊತೆಗೆ 2023 ರಲ್ಲಿ ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗಲೇ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಸಾರ್ವಜನಿಕ ಗ್ಯಾಲರಿಯಿಂದ ಕೆಳಗೆ ಧುಮುಕಿದ್ದರು. ಇನ್ನಿಬ್ಬರು ಸಂಸತಿನ ಹೊರಗಿನ ಆವರಣದಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ್ದರು. ಈ ನಾಲ್ವರನ್ನೂ ನಂತರ ಭದ್ರತಾ ಸಿಬ್ಬಂದಿ ಬಂಧಿಸಿದ್ದರು.