ಅಡುಗೆ ಮಾಡುವುದಕ್ಕೆಂದು ಆಲೂಗಡ್ಡೆ (Potato) ಕೈಗೆತ್ತಿಕೊಂಡರೆ, ಸಣ್ಣ ಬಿಳಿ, ಹಳದಿ ಅಥವಾ ಹಸಿರು ಬಣ್ಣದ ಮೊಳಕೆಗಳು ಅವುಗಳಿಂದ ಹೊರಗೆ ಇಣುಕುತ್ತಿರುವುದು ಕಣ್ಣಿಗೆ ಬೀಳುತ್ತದೆ. ಏನು ಮಾಡಬೇಕೀಗ? ಮೊಳಕೆ ಬಂದ ಆಲೂಗಡ್ಡೆ ಅಥವಾ ಬಟಾಟೆಯನ್ನು ಬಳಸಬೇಕೋ ಅಥವಾ ಎಸೆಯಬೇಕೋ? ಅದರಲ್ಲೂ ಬಟಾಟೆಯ ಚರ್ಮವು ಹಸಿರು ಬಣ್ಣಕ್ಕೆ ತಿರುಗಿದ್ದರೆ ಉಪಯೋಗಿಸಬಹುದೇ? ಆ ಹಸಿರು ಬಣ್ಣದ ಭಾಗವನ್ನು ಕತ್ತರಿಸಿ ಬಿಸಾಡಿದರೆ ಉಳಿದಿದ್ದು ಬಳಕೆಗೆ ಯೋಗ್ಯವೇ? ಇಂಥ ಹಲವಾರು ಪ್ರಶ್ನೆಗಳು ಮನದಲ್ಲಿ ಬಂದಿರಬಹುದು. ಅವುಗಳಿಗೆ ಉತ್ತರ ಇಲ್ಲಿದೆ.
ಮೊಳಕೆ ಬರುವುದೇಕೆ?
ಯಾವುದೇ ಆಹಾರ ವಸ್ತು ಮೊಳಕೆ ಬರಬೇಕೆಂದರೆ ಅದಕ್ಕೆ ಅಗತ್ಯ ಇರುವಷ್ಟು ತೇವಾಂಶ ದೊರೆಯಬೇಕಾಗುತ್ತದೆ. ದೀರ್ಘ ಕಾಲದಿಂದ ಬಟಾಟೆ ನಮ್ಮ ಸಂಗ್ರಹದಲ್ಲಿ ಕುಳಿತಿದ್ದರೆ, ಇಟ್ಟಲ್ಲೇ ಮೊಳಕೆಯೊಡೆಯುವುದು ಸಾಮಾನ್ಯ. ತನ್ನೊಳಗಿನ ಪಿಷ್ಟವು ವಿಘಟನೆಯಾಗಿ, ಮೊಳಕೆ ಒಡೆದು ಹೊಸ ಸಸ್ಯವಾಗಿ ಮಾರ್ಪಡುವುದಕ್ಕೆ ಏನು ಬೇಕೋ ಅದನ್ನು ಆ ಗಡ್ಡೆಯೇ ಮಾಡಿಕೊಳ್ಳುತ್ತಿರುವ ಲಕ್ಷಣವಿದು.
ಯಾವಾಗ?
ಆಲೂಗಡ್ಡೆ ಮೊಳಕೆ ಬರುವುದಕ್ಕೆ ಹಲವು ಕಾರಣಗಳಿವೆ. ಅದನ್ನು ದೀರ್ಘಕಾಲ ಸಂಗ್ರಹಿಸಿಟ್ಟಿದ್ದರೆ ಮಾತ್ರವೇ ಅಲ್ಲ, ಮಳೆಗಾಲದ ದಿನಗಳಲ್ಲಿ ಅಥವಾ ವಾತಾವರಣದಲ್ಲಿ ತೇವಾಂಶ ಹೆಚ್ಚಿದ್ದರೆ ಆಗಲೂ ಆಲೂಗಡ್ಡೆಗೆ ಗಡ್ಡ-ಮೀಸೆ ಬರಬಹುದು. ಈರುಳ್ಳಿಯ jತೆಗೆ ಇದನ್ನು ಶೇಖರಿಸಿಟ್ಟರೆ ಈ ಸಮಸ್ಯೆ ಎದುರಾಗುತ್ತದೆ. ಫ್ರಿಜ್ನಲ್ಲಿ ಶೇಖರಿಸಿದಾಗಲೂ ಈ ಸಮಸ್ಯೆ ಕಾಣಿಸಬಹುದು.
ಸಮಸ್ಯೆಯೇನು?
ಕಾಳುಗಳನ್ನೆಲ್ಲಾ ನಾವು ಮೊಳಕೆ ಬರಿಸಿಕೊಂಡೇ ತಿನ್ನುವುದಿಲ್ಲವೇ? ಹಾಗಾದ ಮೇಲೆ ಬಟಾಟೆ ಮೊಳಕೆ ಬಂದರೆ ಏನು ತೊಂದರೆ? ಅದನ್ನು ತಿನ್ನುವುದರಲ್ಲಿ ಏನು ಸಮಸ್ಯೆಯಿದೆ? ಮೊಳಕೆ ಬಂದ ಆಲೂಗಡ್ಡೆಯಲ್ಲಿ ಸೊಲಾನಿನ್ನಂಥ ಟಾಕ್ಸಿನ್ಗಳು ಶೇಖರವಾಗುತ್ತವೆ. ಇವುಗಳು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸೇರಿದರೆ ತೊಂದರೆಯನ್ನು ಉಂಟು ಮಾಡಬಲ್ಲವು. ಹೊಟ್ಟೆ ಬುಡಮೇಲಾದ ಅನುಭವ, ಹೊಟ್ಟೆ ನೋವು, ತೊಳೆಸಿದಂತಾಗುವುದು, ವಾಂತಿ ಮುಂತಾದ ವಿಷಾಹಾರದ ಲಕ್ಷಣಗಳು ಕಾಣುತ್ತವೆ. ಹಾಗಾದರೆ ಮೊಳಕೆ ಬಂದ ಆಲೂಗಡ್ಡೆ ತಿಂದರೆ ಹೊಟ್ಟೆ ಹಾಳಾಗುವುದು ನಿಶ್ಚಿತವೇ? ಹಾಗೇನಿಲ್ಲ!
ಉಪಯೋಗಿಸಬಹುದು
- ಮೊಳಕೆಗಳು ಇನ್ನೂ ಸಣ್ಣದಾಗಿದ್ದು, ಅರ್ಧ ಇಂಚಿಗಿಂತ ಚಿಕ್ಕದಾಗಿದ್ದರೆ
- ಆಲೂಗಡ್ಡೆ ಎಲ್ಲೂ ಮೆತ್ತಗಾಗದೆ ಗಟ್ಟಿಯೇ ಇದ್ದರೆ
- ಚರ್ಮದ ಮೇಲೆ ಅಲ್ಪಸ್ವಲ್ಪ ಹಸಿರು ಚುಕ್ಕಿಗಳಿದ್ದರೆ ಅವುಗಳನ್ನು ಕತ್ತರಿಸಿ ಬಿಸಾಡಿ, ಉಳಿದಿದ್ದನ್ನು ಬಳಸಬಹುದು.
ಉಪಯೋಗಿಸಬಾರದು
- ಆಲೂಗಡ್ಡೆ ಮೆತ್ತಗಾಗಿ, ಅದರ ಮೇಲ್ಮೈ ಸುಕ್ಕಾಗಿದ್ದರೆ
- ಚರ್ಮದ ಮೇಲೆ ದೊಡ್ಡ ಹಸಿರು ಭಾಗಗಳಿದ್ದರೆ
- ಮೊಳಕೆಗಳು ಉದ್ದವಿದ್ದು, ಸುಕ್ಕಾಪಟ್ಟೆ ಇದ್ದರೆ
ಇದನ್ನು ತಡೆಯುವುದು ಹೇಗೆ?
ಇವುಗಳನ್ನು ಸರಿಯಾಗಿ ಶೇಖರಿಸಿ ಇಟ್ಟುಕೊಳ್ಳುವುದು ಮುಖ್ಯ. ಸಾಧ್ಯವಾದರೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಬದಲು, ಬೇಕಾದಷ್ಟೇ ತಂದಿಟ್ಟುಕೊಳ್ಳಿ. ಹಾಗೆ ತಂದಿದ್ದನ್ನು ತಂಪಾದ, ಶುಷ್ಕವಾದ ಮತ್ತು ಕತ್ತಲೆಯಿರುವ ಜಾಗದಲ್ಲಿ ಶೇಖರಿಸಿಡಿ. ಫ್ರಿಜ್ನಲ್ಲಿ ಎಂದೂ ಇಡಬೇಡಿ. ಇದನ್ನು ಈರುಳ್ಳಿಯ ಜತೆಗೆ ಒಂದೇ ಬುಟ್ಟಿಯಲ್ಲಿ ತುಂಬಿಸಿಡಬೇಡಿ. ಈರುಳ್ಳಿಗಳು ಬಿಡುಗಡೆ ಮಾಡುವಂಥ ಕೆಲವು ಅಂಶಗಳಿಂದ ಬಟಾಟೆ ಬೇಗನೇ ಮೊಳಕೆಯೊಡೆಯುತ್ತದೆ. ಇಷ್ಟಾದ ಮೇಲೂ ಒಂದೊಮ್ಮೆ ಆಲೂಗಡ್ಡೆಯನ್ನು ಬೇಯಿಸಿದ ಮೇಲೆ ಅದರ ರುಚಿ ಸರಿಯಾಗಿಲ್ಲ ಎನಿಸಿದರೆ, ತಿನ್ನಬೇಡಿ; ಎಸೆಯಿರಿ.