ಕೋಲಾರ : ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಹೊನ್ನುಡಿ ಪತ್ರಿಕೆ ಸಂಪಾದಕ ಎಂ.ಜಿ. ಪ್ರಭಾಕರ (76) ಭಾನುವಾರ ರಾತ್ರಿ ನಗರದ ಕೋಟೆಯ ತಮ್ಮ ನಿವಾಸದಲ್ಲಿ ನಿಧನರಾದರು.
ಅಲ್ಪಕಾಲದ ಅಸೌಖ್ಯಕ್ಕೆ ತುತ್ತಾಗಿದ್ದ ಪ್ರಭಾಕರ ಅವರನ್ನು ಭಾನುವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 9:30 ವೇಳೆಗೆ ವಿಧಿವಶರಾದರು. ಪ್ರಭಾಕರ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯವಿಧಿಗಳು ಸೋಮವಾರ ಮಧ್ಯಾಹ್ನ ನಡೆಯಲಿವೆ.ಮೂಲಕ ಕಂಟ್ರಾಕ್ಟರ್ ಆಗಿದ್ದ ಪ್ರಭಾಕರ್ 1980ರ ದಶಕದಲ್ಲಿ ಹೊನ್ನುಡಿ ಪತ್ರಿಕೆಯ ಪಾಲುದಾರರಾಗಿ ಪತ್ರಿಕೋದ್ಯಮ ಪ್ರವೇಶಿಸಿದರು.
ಕಳೆದ ಮೂರು ದಶಕಗಳಿಂದ ಹೊನ್ನುಡಿ ಸಂಪಾದಕರಾಗಿದ್ದ ಅವರು ತಮ್ಮ ಹೊನ್ನಲಗು ಅಂಕಣ ಹಾಗೂ ಮೊನಚು ಬರವಣಿಗೆಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜನಪ್ರಿಯರಾಗಿದ್ದರು.
ಎರಡು ಬಾರಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಪ್ರಭಾಕರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದರು.

































