ನವದೆಹಲಿ :ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಕುರಿತು ಬಹಳ ಸಮಯದಿಂದ ಚರ್ಚೆಯಲ್ಲಿದೆ. ಅನೇಕರು ಇದನ್ನು ಒಪ್ಪಿಕೊಂಡರೇ , ಇನ್ನು ಕೆಲವು ಜನರು ಇದನ್ನು ವಿರೋಧಿಸಿದ್ದಾರೆ.
ಮನೋವೈದ್ಯರು ಸರಿಯಾದ ಸಮಯದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಒದಗಿಸಬೇಕೆಂದು ಪ್ರತಿಪಾದಿಸುತ್ತಾರೆ. ಇದರ ಮಧ್ಯೆ, ಇದೀಗ ಸುಪ್ರೀಂ ಕೋರ್ಟ್ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡುವ ಮಹತ್ವದ ಬಗ್ಗೆ ಪ್ರಮುಖವಾದ ಆದೇಶವನ್ನು ಹೊರಡಿಸಿದೆ. 9 ನೇ ತರಗತಿಯಿಂದ ಪ್ರಾರಂಭಿಸುವ ಬದಲು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಆರಾಧೆ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಈ ಹೇಳಿಕೆ ನೀಡಿದೆ. ಪ್ರೌಢಾವಸ್ಥೆಯ ನಂತರ ಅವರ ದೇಹದಲ್ಲಿ ಆಗುವ ಬದಲಾವಣೆಗಳು ಮತ್ತು ಅವರು ತೆಗೆದುಕೊಳ್ಳಬೇಕಾದ ಕಾಳಜಿ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಮಕ್ಕಳಿಗೆ ತಿಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಳ್ಳುವುದು ಜವಾಬ್ದಾರಿಯಾಗಿದೆ ಎಂದು ಪೀಠವು ಹೇಳಿದೆ.