ಮಂಗಳೂರು: ಉತ್ತರ ಪ್ರದೇಶದ ವ್ಯಕ್ತಿಯೋರ್ವ ಸಿಐಎಸ್‌ಎಫ್ ಮಹಿಳಾ ಅಧಿಕಾರಿಯ ವಿರುದ್ಧ ಲೈಂಗಿಕ ವಂಚನೆ ಮತ್ತು ಹಣಕಾಸು ಮೋಸದ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಲಾಡ್ಜ್‌ನಲ್ಲಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶದ ಗಾಜಿಪುರದ ಅಭಿಷೇಕ್ ಸಿಂಗ್ (40) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಮೊದಲು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, CISF ಸಹಾಯಕ ಕಮಾಂಡೆಂಟ್ ಮೋನಿಕಾ ಸಿಹಾಗ್ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿ ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಪ್ರೇಮದ ಹೆಸರಿನಲ್ಲಿ ವಂಚನೆ
ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ವಸ್ತುಪ್ರದರ್ಶನಕ್ಕಾಗಿ ಮಂಗಳೂರಿಗೆ ಬಂದಿದ್ದರು. ಆದರೆ, ಮಾರ್ಚ್.3ರಂದು ನಗರದ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವಿಡಿಯೋ ಪ್ರಕಾರ, ಮೋನಿಕಾ ಈಗಾಗಲೇ ವಿವಾಹಿತೆಯಾಗಿದ್ದು, ಆ ಮಾಹಿತಿಯನ್ನು ಮುಚ್ಚಿಟ್ಟು ದೈಹಿಕ ಮತ್ತು ಆರ್ಥಿಕ ಲಾಭ ಪಡೆದು ತಮ್ಮನ್ನು ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.
15 ಲಕ್ಷ ರೂ. ಹಣ, ಚಿನ್ನ ವಂಚನೆ ಆರೋಪ
ಮೃತನ ಸಹೋದರ ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, 15 ಲಕ್ಷ ರೂಪಾಯಿ ಮತ್ತು 8 ಲಕ್ಷ ಮೌಲ್ಯದ ಚಿನ್ನ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ CISF ಅಧಿಕಾರಿ ಮೋನಿಕಾ ಸಿಹಾಗ್‌ಗೆ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.