ಚಿತ್ರದುರ್ಗ: ಚಿತ್ರದುರ್ಗ ನಗರಸಭೆಯ ಉಪಾಧ್ಯಕ್ಷೆಯಾಗಿ 12ನೇ ವಾರ್ಡ್ ಸದಸ್ಯೆ ಶಕೀಲಾಬಾನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶ್ರೀದೇವಿ ಜಿ.ಎಸ್ ಅವರ ರಾಜೀನಾಮೆಯಿಂದ ತೆರವಾದ ನಗರಸಭೆ ಉಪಾಧ್ಯಕ್ಷೆ ಸ್ಥಾನದ ಆಯ್ಕೆಗೆ ಸೋಮವಾರ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಚುನಾವಣೆ ನಡೆಯಿತು.
ಶಕೀಲಾ ಬಾನು ಅವರು ನಗರಸಭೆ ಅಧ್ಯಕ್ಷೆ ಸಮಿತಾ ಬಿ.ಎನ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸುರುಲ್ಲಾ ಸೇರಿದಂತೆ ಇತರೆ ಸದಸ್ಯರೊಂದಿಗೆ ಆಗಮಿಸಿ ಉಪಾಧ್ಯಕ್ಷೆ ಸ್ಥಾನದ ಆಯ್ಕೆಗೆ ನಾಮಪತ್ರ ಸಲ್ಲಿಸಿದರು. ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ನಾಮಪತ್ರ ಸ್ವೀಕರಿಸಿ, ನಾಮಪತ್ರದ ಪರಿಶೀಲನೆ ಕಾರ್ಯ ನಡೆಸಿದರು.
ನಿಗಧಿಪಡಿಸಿದ ಅವಧಿಯೊಳಗೆ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಶಕೀಲಾ ಬಾನು ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಘೋಷಿಸಿದರು. ಈ ವೇಳೆ ನಗರ ಸಭೆ ಪೌರಾಯಕ್ತೆ ಎಂ.ರೇಣುಕಾ ಉಪಸ್ಥಿತರಿದ್ದರು.
35 ವಾರ್ಡ್‍ಗಳ ಚುನಾಯಿತ ಸದಸ್ಯರು ಹಾಗೂ ಸ್ಥಳೀಯ ವಿಧಾನಸಭೆ ಶಾಸಕ ಮತ್ತು ಲೋಕಸಭಾ ಸಂಸದರು ಸೇರಿ ಒಟ್ಟು 37 ಸದಸ್ಯರ ಸಂಖ್ಯಾ ಬಲವನ್ನು ಚಿತ್ರದುರ್ಗ ನಗರಸಭೆ ಹೊಂದಿದೆ. ಇದರಲ್ಲಿ ಒಟ್ಟು 9 ಸದಸ್ಯರು ಉಪಾಧ್ಯಕ್ಷರ ಚುನಾವಣೆ ಸಭೆಗೆ ಗೈರು ಹಾಜರಾಗಿದ್ದರು.
ನೂತನವಾಗಿ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾದ ಶಕೀಲಾ ಬಾನು ಅವರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನಗರಸಭೆ ಅಧ್ಯಕ್ಷೆ ಸಮಿತಾ ಬಿ.ಎನ್. ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸುರುಲ್ಲಾ ಸೇರಿದಂತೆ ಸದಸ್ಯರು ಅಭಿನಂದಿಸಿದರು.