ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಏಪ್ರಿಲ್ 22ರಂದು2024 ರ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ಶಕ್ತಿ ದುಬೆ ಮೊದಲ ಸ್ಥಾನ ಗಳಿಸಿದ್ದಾರೆ. ತಮ್ಮ ಐದನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅನೇಕ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಿವಾಸಿ ಶಕ್ತಿ ದುಬೆ ಅವರ ತಂದೆ ದೇವೇಂದ್ರ ದುಬೆ ಯುಪಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್. ತಾಯಿ ಗೃಹಿಣಿ. ಶಕ್ತಿ ದುಬೆ ಅವರ ತಂದೆಗೆ ಐಎಎಸ್ ಆಗಬೇಕು ಎಂಬ ಕನಸ್ಸಿತ್ತು. ಹೀಗಾಗಿ ಶಕ್ತಿ ದುಬೆ ಅವರಿಗೆ ಅವರ ಹೆತ್ತವರಿಂದ ಸಂಪೂರ್ಣ ಬೆಂಬಲ ದೊರೆಯಿತು.
ಯುಪಿಎಸ್‌ಸಿಯಲ್ಲಿ ಪದವಿಯಲ್ಲಿ ಶಕ್ತಿ ದುಬೆ ಅವರು ಓದಿದ ವಿಷಯ ಲಭ್ಯವಿರಲಿಲ್ಲ. ಹೀಗಾಗಿ ಅವರು ತಮ್ಮ ಐಚ್ಛಿಕ ವಿಷಯವನ್ನು ಬದಲಾಯಿಸಬೇಕಾಯಿತು. ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ಐಚ್ಛಿಕ ವಿಷಯಗಳಾಗಿ ತೆಗೆದುಕೊಂಡರು. ಯಾವುದೇ ತರಬೇತಿಯನ್ನು ಪಡೆಯದೇ ಸ್ವಂತವಾಗಿ ತಯಾರಿ ನಡೆಸಿದರು.
ಯುಪಿಎಸ್‌ಸಿಯಲ್ಲಿ ಉನ್ನತ ರ‍್ಯಾಂಕ್ ಪಡೆಯುವುದು ಶಕ್ತಿ ಅವರ ಹಲವು ವರ್ಷಗಳ ಕನಸ್ಸಾಗಿತ್ತು.2018 ರಲ್ಲಿ ಯುಪಿಎಸ್‌ಸಿಗೆ ತಯಾರಿ ನಡೆಸಲು ದೆಹಲಿಗೆ ಬಂದಿದ್ದರು. ಅಂದಿನಿಂದ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾಗಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದರು. ಅವರು ಮೂರು ಸಲ ಪೂರ್ವಭಾವಿ ಪರೀಕ್ಷೆಯನ್ನೂ ಪಾಸ್ ಮಾಡಲು ಸಾಧ್ಯವಾಗಿರಲಿಲ್ಲ.
ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದಾಗ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನ ಎದುರಿಸಿದ್ದರು. ಆದರೆ, ಅಂತಿಮವಾಗಿ ಅವರಿಗೆ ಯಶಸ್ಸು ದೊರೆತಿರಲಿಲ್ಲ. ಆದರೆ ಛಲ ಬಿಡದೇ ಓದಿದ ಅವರು ತಮ್ಮ ಐದನೇ ಪ್ರಯತ್ನದಲ್ಲಿ ಮೊದಲ ರ‍್ಯಾಂಕ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.