ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ನಡೆದಿದೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ದರೋಡೆ ನಡೆದಿದೆ.ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ಬ್ಯಾಂಕ್ನ ಮ್ಯಾನೇಜರ್, ಕ್ಯಾಶಿಯರ್, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ, ಅವರನ್ನು ರೂಂನಲ್ಲಿ ಕೂಡಿ ಹಾಕಿ ದರೋಡೆ ನಡೆಸಿದ್ದಾರೆ.
ಬ್ಯಾಂಕ್ ವಹಿವಾಟು ಸಮಯ ಮುಗಿದ ಮೇಲೆ ಬ್ಯಾಂಕ್ಗೆ 5ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ಕೃತ್ಯ ಎಸಗಿದ್ದಾರೆ.ಬ್ಯಾಂಕ್ನಲ್ಲಿ ಎಷ್ಟು ಹಣ ಕಳ್ಳತನದ ಆಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 8 ಕೋಟಿ ರೂ. ನಗದು ಹಣ ಹಾಗೂ ಸುಮಾರು 50 ಕೆಜಿಗೂ ಆಧಿಕ ಚಿನ್ನಾಭರಣ ದರೋಡೆಯಾಗಿರುವ ಶಂಕೆ ವ್ಯಕ್ತವಾಗಿದೆ.ಪೊಲೀಸರು ಬ್ಯಾಂಕಿನ ಸಿಸಿ ಕ್ಯಾಮೆರಾ ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರ ರಸ್ತೆಗಳಿಗೂ ಪೊಲೀಸರು ನಾಕಾಬಂದಿ ಹಾಕಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಬ್ಯಾಂಕ್ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಲ್ಲಿ ಆತಂಕ ಎದುರಾಗಿದ್ದು ಭಾರಿ ಸಂಖ್ಯೆಯಲ್ಲಿ ರಾತ್ರಿ ತನಕ ಜನರು ಸೇರಿದ್ದರು.ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ ದರೋಡೆಕೋರರು ಮಹಾರಾಷ್ಟ್ರದತ್ತ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ಚಡಚಣ ಪಟ್ಟಣದಿಂದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಿಜಂತಿ ಗ್ರಾಮದ ಮಾರ್ಗವಾಗಿ ಹೋಗಿರುವ ದರೋಡೆಕೋರರ ಗುಂಪು ಚದುರಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹುಲಿಜಂತಿ ಗ್ರಾಮದ ಬಳಿ ದರೋಡೆಕೋರರು ಪ್ರಯಾಣ ಮಾಡುತ್ತಿದ್ದ ಕಾರು ಕುರಿಗಳಿಗೆ ಡಿಕ್ಕಿಯಾಗಿದೆ.
ಕುರಿಗಳಿಗೆ ಡಿಕ್ಕಿಯಾದದ್ದನ್ನ ಪ್ರಶ್ನಿಸಿದ ಗ್ರಾಮಸ್ಥರಿಗೆ ಕಾರಿನಲ್ಲಿದ್ದ ಓರ್ವ ದರೋಡೆಕೋರ ಕೈಯಲ್ಲಿ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿ ಪರಾರಿಯಾಗಿರುವುದು ತಿಳಿದುಬಂದಿದೆ.KA 24 DH 2456 ನಂಬರಿನ ಕಾರಿನಲ್ಲಿ ಬಂದಿದ್ದ ಓರ್ವ ದರೋಡೆಕೋರನ ಕಾರಿನಲ್ಲಿ ಅಲ್ಪಸ್ವಲ್ಪ ಚಿನ್ನಾಭರಣ ಬಿದ್ದಿತ್ತು. ಇನ್ನುಳಿದ ದರೋಡೆಕೋರರು ಪ್ರತ್ಯೇಕವಾಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.