ನವದೆಹಲಿ : ಪ್ರತಿ ವರ್ಷ ಲಕ್ಷಾಂತರ ಯುವಕರು ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸುತ್ತಾರೆ. ದೇಶದ ಅತ್ಯಂತ ಪ್ರತಿಷ್ಠಿತ ಸೇವೆಗಳಲ್ಲಿ ಒಂದಾದ ನಾಗರಿಕ ಸೇವೆಗೆ ಸೇರುವ ಕನಸು ಬಹುತೆಕ ಜನರಿಗೆ ಸವಾಲಿನ ಪ್ರಯಾಣವಾಗುತ್ತದೆ. ಆದರೆ ಕೆಲವರ ಕಥೆಗಳು ಕೇವಲ ಯಶಸ್ಸಿನಲ್ಲೇ ನಿಲ್ಲದೆ, ಶಿಸ್ತು, ಸಮತೋಲನ ಮತ್ತು ಆತ್ಮವಿಶ್ವಾಸದ ಪಾಠಗಳನ್ನು ಸಮಾಜಕ್ಕೆ ನೀಡುತ್ತವೆ. ಅಂತಹ ಅಪರೂಪದ ಕಥೆ ಮಧ್ಯಪ್ರದೇಶದ ಇಂದೋರ್ ಮೂಲದ ಐಎಎಸ್ ಅಧಿಕಾರಿ ಶ್ರದ್ಧಾ ಗೋಮ್ ಅವರದ್ದು.
ಶ್ರದ್ಧಾ ಗೋಮ್ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಓದಿನ ಮೇಲಿನ ಆಸಕ್ತಿ ಹೆಚ್ಚಾಗಿತ್ತು ಇಂದೋರ್ನ ಸೇಂಟ್ ರಾಫೆಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಅವರು, 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದರು. ಸರಿಯಾದ ದಿಕ್ಕಿನಲ್ಲಿ ನಿರಂತರ ಪರಿಶ್ರಮ ಮಾಡಿದರೆ ಯಶಸ್ಸು ಖಂಡಿತ ಸಾಧ್ಯ ಎಂಬುದನ್ನು ಅವರ ಆರಂಭಿಕ ಶಿಕ್ಷಣವೇ ತೋರಿಸಿತ್ತು.
ಶ್ರದ್ಧಾ ಅವರ ಯಶಸ್ಸಿನ ಹಿಂದೆ ಅವರ ಕುಟುಂಬದ ಬೆಂಬಲ ಪ್ರಮುಖವಾಗಿತ್ತು. ಗೃಹಿಣಿಯಾದ ತಾಯಿ ವಂದನಾ ಗೋಮ್ ಅವರು ಸದಾ ಸ್ವಾವಲಂಬನೆ ಮತ್ತು ಶಿಸ್ತಿನ ಮಹತ್ವವನ್ನು ಮಗಳ ಮನಸ್ಸಿನಲ್ಲಿ ಬಿತ್ತಿದರು. ನಿವೃತ್ತ ಎಸ್ಬಿಐ ಅಧಿಕಾರಿ ತಂದೆ ರಮೇಶ್ ಕುಮಾರ್ ಗೋಮ್ ಅವರು ಅಧ್ಯಯನಕ್ಕೆ ಆದ್ಯತೆ ನೀಡುವಂತೆ ಮಾರ್ಗದರ್ಶನ ನೀಡಿದರು. ಶಾಲಾ ಶಿಕ್ಷಣದ ಬಳಿಕ ಶ್ರದ್ಧಾ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) ಬರೆದು ರಾಷ್ಟ್ರಮಟ್ಟದಲ್ಲಿ ಉನ್ನತ ಶ್ರೇಣಿಯನ್ನು ಪಡೆದು, ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಶಾಲೆ (NLSIU) ಯಲ್ಲಿ ಪ್ರವೇಶ ಪಡೆದರು. ಅಲ್ಲಿ ಕೂಡ ಅವರ ಪರಿಶ್ರಮ ಮತ್ತು ಬುದ್ಧಿವಂತಿಕೆ ನಿರಂತರವಾಗಿ ಗುರುತಿಸಲ್ಪಟ್ಟಿತು.
ಕಾನೂನು ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂದರ್ಭದಲ್ಲಿ, ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದ ಕ್ಷಣ ಶ್ರದ್ಧಾ ಅವರ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲಾಗಿತ್ತು. ನಂತರ ಅವರ ವೃತ್ತಿಜೀವನವು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಗೆ ದಾರಿ ಮಾಡಿಕೊಟ್ಟಿತು. ಯೂನಿಲಿವರ್ ಫ್ಯೂಚರ್ ಲೀಡರ್ಸ್ ಕಾರ್ಯಕ್ರಮದಡಿ ಲಂಡನ್ ಮತ್ತು ಮುಂಬೈನಲ್ಲಿ ಕಾನೂನು ವ್ಯವಸ್ಥಾಪಕರಾಗಿ ಅವರು ಕೆಲಸ ನಿರ್ವಹಿಸಿದರು. ಭದ್ರ ಹಾಗೂ ಭರವಸೆಯ ಕಾರ್ಪೊರೇಟ್ ವೃತ್ತಿಜೀವನ ಹೊಂದಿದ್ದರೂ, ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ಕನಸು ಅವರ ಮನಸ್ಸಿನಲ್ಲಿ ಇನ್ನಷ್ಟು ಬಲಪಡುತ್ತಲೇ ಇತ್ತು.
ಈ ಹಿನ್ನಲೆಯಲ್ಲಿ ಶ್ರದ್ಧಾ ಗೋಮ್ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಾಗಲು ತೀರ್ಮಾನಿಸಿದರು. ಅವರು ತಮ್ಮ ಐಚ್ಛಿಕ ವಿಷಯವಾಗಿ ಕಾನೂನನ್ನು ಆಯ್ಕೆ ಮಾಡಿಕೊಂಡು, ಸಂಪೂರ್ಣ ತಯಾರಿಗಾಗಿ ಉದ್ಯೋಗವನ್ನೇ ತೊರೆದರು. ವಿಶೇಷವೆಂದರೆ, ಅವರು ಯಾವುದೇ ಕೋಚಿಂಗ್ ಅಥವಾ ತರಬೇತಿ ಕೇಂದ್ರಗಳ ನೆರವಿಲ್ಲದೆ ಸಂಪೂರ್ಣವಾಗಿ ಸ್ವಯಂ ಅಧ್ಯಯನದ ಮೇಲೆ ಅವಲಂಬಿಸಿದ್ದರು. ಅವರು ದಿನಕ್ಕೆ 9 ರಿಂದ 10 ಗಂಟೆಗಳವರೆಗೆ ನಿರಂತರವಾಗಿ ಓದುತ್ತಿದ್ದರು. ಕ್ರಮಬದ್ಧ ಅಧ್ಯಯನ, ಸರಿಯಾದ ತಂತ್ರ ಮತ್ತು ಕಠಿಣ ಸ್ವಯಂ-ಶಿಸ್ತು ಅವರ ತಯಾರಿಯ ಪ್ರಮುಖ ಬಲಗಳಾಗಿದ್ದವು.
ಅವರ ಅಚಲ ಪರಿಶ್ರಮಕ್ಕೆ ಕೊನೆಗೂ ಫಲ ದೊರೆಯಿತು. 2021ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ಉತ್ತೀರ್ಣರಾದ ಶ್ರದ್ಧಾ ಗೋಮ್, ಅಖಿಲ ಭಾರತ ಶ್ರೇಣಿ 60 (AIR 60) ಗಳಿಸಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಅವರ ಈ ಯಶೋಗಾಥೆ ಇಂದು ಅನೇಕ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿ ನಿಂತಿದ್ದು, ಕನಸುಗಳು ದೃಢ ಸಂಕಲ್ಪದೊಂದಿಗೆ ಬೆನ್ನತ್ತಿದರೆ ಅವು ನಿಜವಾಗಲೇ ಬೇಕೆಂಬುದನ್ನು ಸಾಬೀತುಪಡಿಸಿದೆ.

































