ಚಿತ್ರದುರ್ಗ : ಜನ ಕಲ್ಯಾಣ ಸ್ವಾಭಿಮಾನಿ ಸಮಾವೇಶವನ್ನು ಡಿ.5 ರಂದು ಹಾಸನದಲ್ಲಿ ನಡೆಸಲಾಗುವುದೆಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕ-ಯುವತಿಯರು ಶೋಷಿತರು, ಮಹಿಳೆಯರಲ್ಲಿ ಬಲ ತುಂಬುವ ಉದ್ದೇಶದಿಂದ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳಿಂದ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳುವರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಬಲಪಡಿಸುವುದು ಜನ ಕಲ್ಯಾಣ ಸ್ವಾಭಿಮಾನಿ ಸಮಾವೇಶದ ಉದ್ದೇಶ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಐದು ಉಚಿತ ಗ್ಯಾರೆಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹದಿನೇಳು ಬಜೆಟ್ ಮಂಡಿಸಿರುವ ಅನುಭವವಿದೆ. ಕೋಮುವಾದಿ ಬಿಜೆಪಿ.ಯವರು ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯನವರನ್ನು ಸಿಲುಕಿಸಲು ಏನೆಲ್ಲಾ ಕುತಂತ್ರ ನಡೆಸಿದರು ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಕೈಹಿಡಿದು ಬಿಜೆಪಿ. ಅಪ ಪ್ರಚಾರಕ್ಕೆ ತಕ್ಕ ಉತ್ತರ ನೀಡಿದ್ದಾರೆಂದರು.
ಯಾವುದೇ ಕಪ್ಪುಚುಕ್ಕೆಯಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ವಿದ್ಯುತ್, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದನ್ನು ಸಹಿಸದೆ ಬಿಜೆಪಿ.ಯವರು ಇಲ್ಲಸಲ್ಲದ ಆರೋಪ ಹೊರಿಸುತ್ತಿರುವುದರಲ್ಲಿ ಅರ್ಥವಿಲ್ಲ. ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿಯಿಂದ ಯಾವುದೆ ಬದಲಾವಣೆಯಾಗಿಲ್ಲ. ಅದಾನಿ, ಅಂಬಾನಿ, ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗಿದೆ. ಬಡವರ ಕಷ್ಟ ಗೊತ್ತಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಯುವ ಸಮೂಹವನ್ನು ವಂಚಿಸಿದ್ದಾರೆ. ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿ ಭರವಸೆ ನೀಡಿ ಯಾವುದನ್ನು ಈಡೇರಿಸಿಲ್ಲ ಎಂದು ಹೆಚ್.ಆಂಜನೇಯ ಆಪಾದಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಆರ್.ನರಸಿಂಹರಾಜ, ಬಿ.ಪಿ.ಪ್ರಕಾಶ್ಮೂರ್ತಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಆರ್.ಪ್ರಕಾಶ್
ಬಿ.ಪಿ.ತಿಪ್ಪೇಸ್ವಾಮಿ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ವಕೀಲರುಗಳಾದ ರವೀಂದ್ರ, ಶರಣಪ್ಪ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು