ಶ್ರೀನಗರ : 1990ರಲ್ಲಿ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಅವರ ಹತ್ಯೆಯ ತನಿಖೆ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಮಂಗಳವಾರ ಶ್ರೀನಗರದ ಎಂಟು ಸ್ಥಳಗಳ ಮೇಲೆ ದಾಳಿ ನಡೆಸಿದೆ.
ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ನೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದ ವ್ಯಕ್ತಿಗಳ ನಿವಾಸಗಳನ್ನು ಗುರಿಯಾಗಿಸಿಕೊಂಡು ಶೋಧ ನಡೆಸಲಾಗಿದೆ. ಜೆಕೆಎಲ್‌ಎಫ್‌ನ ಮಾಜಿ ನಾಯಕ ಪೀರ್ ನೂರುಲ್ ಹಕ್ ಶಾ, ಯಾಸಿನ್ ಮಲಿಕ್, ಜಾವೀದ್ ಮೀರ್ ಮನೆ ಮೇಲೆ ರೇಡ್ ಮಾಡಲಾಗಿದೆ. ದಾಳಿ ವೇಳೆ ದಾಖಲೆಗಳು ಮತ್ತು ಡಿಜಿಟಲ್ ಡೇಟಾ ಸೇರಿದಂತೆ ಅಪರಾಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಐಎ ಮಾಹಿತಿ ನೀಡಿದೆ.
35 ವರ್ಷಗಳ ಹಿಂದೆ ಅನಂತನಾಗ್ ಜಿಲ್ಲೆಯ ಸರಳಾ ಭಟ್, ಶ್ರೀನಗರದ ಸೌರಾದಲ್ಲಿರುವ ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 1990ರ ಏಪ್ರಿಲ್ 18ರ ರಾತ್ರಿ ಭಯೋತ್ಪಾದಕರು ಆಕೆಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಕ್ಷಿ-ಪುರಾವೆಗಾಗಿ 8 ಕಡೆ ರೇಡ್ ಮಾಡಿರುವ ಎಸ್‌ಐಎ, ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಜೊತೆ ನಂಟು ಹೊಂದಿದ್ದ ಹಲವರ ಮನೆಗಳಲ್ಲಿ ಶೋಧ ಕಾರ್ಯ ನಡೆಸಿದೆ.